ಹಿರಿಯೂರು : ಹಿರಿಯೂರು ನಗರದ 03 ನೇ ವಾರ್ಡ್ ಪಕ್ಷೇತರ ಸದಸ್ಯೆ ಆರ್. ಶಿವರಂಜನಿ ಮಾಜಿ ಸಚಿವ ಡಿ.ಸುಧಕಾರ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.ಶಿವರಂಜಿನಿ ಬಿಜೆಪಿ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಬಯಸಿದ್ದರು. ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಕಂಡಿದ್ದರು. ಹಿರಿಯೂರು ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪಕ್ಷ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಹಿರಿಯೂರು ನಗರಸಭೆಯಲ್ಲಿ 31 ಸದಸ್ಯರಿದ್ದು, ಕಾಂಗ್ರೆಸ್ 13, ಬಿಜೆಪಿ 06, ಜೆಡಿಎಸ್ 03, ಪಕ್ಷೇತರ 09 ಮಂದಿ ಸದಸ್ಯರಿದ್ದರು. ಇದರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಒಬ್ಬರು ಸದಸ್ಯರು ಮೃತಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಮತ್ತು ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.
ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಬಂದಿರುವುದರಿಂದ ಇಬ್ಬರು ಮಹಿಳಾ ಸದಸ್ಯರ ನಡುವೆ ಸ್ಪರ್ಧೆ ಏರ್ಪಡುವ ಸಾಧ್ಯತೆ ಇದೆ.
ಪಕ್ಷೇತರ ಸದಸ್ಯೆಗೆ ಅಧ್ಯಕ್ಷ ಸ್ಥಾನ ಪಟ್ಟ ಒಲಿಯುವುದೆ ಕಾದು ನೋಡಬೇಕಿದೆ.