ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಖಂಡಿಸಿ ಕರವೇ ಪ್ರತಿಭಟನೆ.
ಹಿರಿಯೂರು : ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಗೆ ಆದೇಶ ಹೊರಡಿಸಿ ಜೊತೆಗೆ ಐವತ್ತು ಕೋಟಿ ಹಣವನ್ನು ಮೀಸಲಿಟ್ಟಿರುವುದು ಇಡೀ ಕನ್ನಡ ನಾಡಿನ ಕನ್ನಡಿಗರಿಗೆ ಮಾಡಿರುವ ಅವಮಾನವಾಗಿದೆ ಎಂಬುದಾಗಿ ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಮೂರ್ತಿ ಪೂಜಾರಿ ಆರೋಪಿಸಿದರು.
ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿ, ಗ್ರೇಡ್ 2 ತಹಶೀಲ್ದಾರರಾದ ಚಂದ್ರಕುಮಾರ್ ರವರಿಗೆ ಮನವಿ ಅರ್ಪಿಸಿ ನಂತರ ಅವರು ಮಾತನಾಡಿದರು.
ಬೆಳಗಾವಿಯಲ್ಲಿ ಎಂ.ಇ.ಎಸ್.ಸಂಘಟನೆಯನ್ನು ಕಟ್ಟಿಕೊಂಡು ಸದಾ ಕನ್ನಡಪರ ಕೆಲಸಗಳಿಗೆ ಅಡ್ಡಗಾಲು ಹಾಕುತ್ತಾ ಕನ್ನಡ ವಿರೋಧತನವನ್ನೇ ಮೈಗೂಡಿಸಿಕೊಂಡು ಇಡೀ ರಾಜ್ಯವೇ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸುತ್ತಿದ್ದರೆ ಗಡಿ ನಾಡಲ್ಲಿ ಅದೇ ನವಂಬರ್ ಒಂದ ರಂದು ಕಪ್ಪುಪಟ್ಟಿ ಧರಿಸಿ ಕರಾಳ ದಿನ ಆಚರಿಸುವ ಮೂಲಕ ಕನ್ನಡಿಗರ ಭಾವನೆಗಳನ್ನು ಕೆರಳಿಸುತ್ತಿರುವ ಇವರಿಗೆ ಸರ್ಕಾರ ಅಭಿವೃದ್ಧಿ ನಿಗಮ ಮಾಡಿರುವ ನಿಜಕ್ಕೂ ವಿಷಾಧಕರ ಸಂಗತಿ ಎಂಬುದಾಗಿ ಅವರು ಅಪಾದಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮ್ಯಾಕ್ಲೊರಹಳ್ಳಿ ಮಾತನಾಡಿ, ವಿಧಾನಸಭೆಯಲ್ಲಿ ನಮ್ಮ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಾ ನಮ್ಮದೇ ನಾಡಿನಲ್ಲಿ ನಮ್ಮದೇ ಹೆಮ್ಮೆಯ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಸ್ಥಾಪಿಸಲು ಅಡ್ಡಪಡಿಸಿದ ಮರಾಠರಿಗೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಿರುವುದು ಸರ್ಕಾರ ಪರೋಕ್ಷವಾಗಿ ಆ ಮರಾಠಪುಂಡರಿಗೆ ಬೆಂಬಲ ನೀಡಿದಂತೆ ಆಗುವುದಿಲ್ಲವೇ ಎಂಬುದಾಗಿ ಅವರು ಪ್ರಶ್ನಿಸಿದರಲ್ಲದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಕೇವಲ 5 ಕೋಟಿ ಅನುದಾನ, ಆದರೆ ಮರಾಠ ಅಭಿವೃದ್ಧಿಗೆ 50 ಕೋಟಿ ಅನುದಾನ ಎಷ್ಟರ ಮಟ್ಟಿಗೆ ಸರಿಯಾಗಿದೆ, ಪ್ರವಾಹ ಪೀಡಿತರಿಗೆ ನೆರವು ನೀಡಲು, ಕಾರ್ಮಿಕರಿಗೆ ಸಂಬಳ ನೀಡಲು ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲ, ಆದರೆ ಮರಾಠ ಅಭಿವೃದ್ಧಿ ಸ್ಥಾಪನೆಗೆ 50 ಕೋಟಿ ಎಲ್ಲಿಂದ ಬಂತು, ಎಂಬುದಾಗಿ ಮುಖ್ಯಮಂತ್ರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಸರ್ಕಾರ ಯಾವ ಸಾಧನೆಯನ್ನು ಮಾಡಲು ಈ ಮರಾಠ ಪ್ರಾಧಿಕಾರ ಸ್ಥಾಪನೆಗೆ ಮುಂದಾಗಿದೆ ಎಂಬುದನ್ನು ಸ್ಪಷ್ಟಪಡಿಸಿ ಇಲ್ಲವೆ ಕನ್ನಡನಾಡಿನ ಹಿತಕ್ಕೆ ಧಕ್ಕೆ ತರುವ ಆದೇಶವನ್ನು ಈ ಕೂಡಲೇ ಹಿಂಪಡೆದುಕೊಳ್ಳಿ, ಇಲ್ಲವಾದಲ್ಲಿ ಸಮಸ್ತ ಕನ್ನಡಿಗರು ಬೀದಿಗಿಳಿದು ಸರ್ಕಾರದ ವಿರುದ್ದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂಬುದಾಗಿ ಅವರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರುಗಳಾದ ಶಿವಕುಮಾರ್, ಗಿರೀಶ್, ಹರೀಶ್, ಶಿವಮೂರ್ತಿ, ಕೆ.ಕೃಷ್ಣಮೂರ್ತಿ, ಮಹೇಶ್, ಬಿ.ಎಂ.ಗಿರೀಶ್, ಮಂಜುಯಾದವ್, ಹರೀಶ್, ನವೀನ್, ಅನೀಲ್, ಜನಾರ್ಧನ್, ಬಸವರಾಜ್, ಕೃಷ್ಣ ಸಾಗರ್, ಶಿವು, ರಾಮಣ್ಣ, ಗಣೇಶ್, ಹಾಗೂ ಇತರೆ ಕರವೇ ಪದಾಧಿಕಾರಿಗಳು ಭಾಗವಹಿಸಿದ್ದರು.