ಬೆಂಗಳೂರು: ಡ್ರಗ್ಸ್ ಪ್ರಕರಣದ ಆರೋಪಿಗಳಲೊಬ್ಬನಾದ ಆದಿತ್ಯ ಆಳ್ವನನ್ನು ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಬಂಧಿಸಿದ್ದಾರೆ. ಮಾಜಿ ಸಚಿವ ಜೀವರಾಜ್ ಆಳ್ವ ಪುತ್ರನಾಗಿರುವ ಆದಿತ್ಯ ಕಳೆದ ನಾಲ್ಕು ತಿಂಗಳಿಂದ ತಲೆಮರೆಸಿಕೊಂಡುಡಿದ್ದ.
ನಿರೀಕ್ಷಣಾ ಜಾಮೀನು ಕೋರಿ ಆದಿತ್ಯ ಆಳ್ವಾ ಸಲ್ಲಿಸಿದ್ದ ಅರ್ಜಿ ಕೂಡ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಚೆನ್ನೈನಲ್ಲಿ ಆದಿತ್ಯ ಆಳ್ವಾ ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಡ್ರಗ್ ಮಾಫಿಯಾ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ತಲೆಮರಿಸಿಕೊಂಡಿದ್ದ ಆದಿತ್ಯ ಆಳ್ವಗೆ ಸಿಸಿಬಿ ಪೊಲೀಸರು ಸೆ. 21ರಂದು ಲುಕ್ಔಟ್ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಜಾಮೀನು ಅರ್ಜಿ ಸಲ್ಲಿಸುವುದನ್ನು ಬಿಟ್ಟು, ತನ್ನ ವಿರುದ್ಧದ ಎಫ್‌ಐಆರ್ ರದ್ದು ಮಾಡುವಂತೆ ಆದಿತ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ.
ಪ್ರಕರಣ ಬೆಳಕಿಗೆ ಬಂದು ಆದಿತ್ಯ ಆಳ್ವ ಪಾತ್ರ ಇರುವುದು ಖಚಿತವಾದ ಬೆನ್ನಲ್ಲೇ ಹೆಬ್ಬಾಳದಲ್ಲಿರುವ ಮನೆ ಹಾಗೂ ರೆಸಾರ್ಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಡ್ರಗ್ಸ್ ಪತ್ತೆಯಾಗಿತ್ತು. ರೆಸಾರ್ಟ್ ಮ್ಯಾನೇಜರ್ ರಾಮ್ ದಾಸ್ನನ್ನು ವಶಕ್ಕೆ ಪಡೆದು ವಿಚಾರಣೆಯನ್ನು ನಡೆಸಲಾಗಿದೆ.
ಇದೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸಿಕ್ಕಿಹಾಕಿಕೊಂಡಿದ್ದರು. ಬಳಿಕ, ಸಂಜನಾ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಇದೀಗ ಈ ಕೇಸ್ನಲ್ಲಿ ಮತ್ತೋರ್ವ ಪ್ರಭಾವಿ ವ್ಯಕ್ತಿಯನ್ನು ಬಂಧಿಸಲಾಗಿದೆ.