ಚಿತ್ರದುರ್ಗ : ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಅತೀವೃಷ್ಟಿಯಿಂದಾಗಿ ರೈತರು ಬೆಳೆದಿದ್ದ ನೂರಾರು ಎಕರೆ ಈರುಳ್ಳಿ ಬೆಳೆ ನಾಶವಾಗಿದೆ. ಇಷ್ಟು ವರ್ಷ ಮಳೆಯಿಲ್ಲದೆ ಬರಪೀಡಿತವಾಗಿದ್ದ ಜಿಲ್ಲೆಗೆ ಈ ಬಾರಿ ಉತ್ತಮ ಮಳೆಯಾಗಿದೆ. ಹೀಗಾಗಿ ಒಳ್ಳೆಯ ಬೆಳೆ ತೆಗೆಯುವ ನಿರೀಕ್ಷೆಯಲ್ಲಿ ಲಕ್ಷಾಂತರ ರೂಪಾಯಿ ಸಾಲ ಸೋಲ ಮಾಡಿ ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಹಲವೆಡೆ ರೈತರ ಈರುಳ್ಳಿ ಬಿತ್ತನೆ ಮಾಡಿದ್ರು, ನಿರೀಕ್ಷೆಯಂತೆ ಪೈರುಗಳು ಕೂಡ ಚನ್ನಾಗಿ ಮೊಳಕೆಯೊಡೆದು ಹಚ್ಚ ಹಸಿರಾಗಿ ಕಂಗೊಳಿಸುತ್ತಿತ್ತು, ಆದರೆ ಸೆಪ್ಟೆಂಬರ್ ತಿಂಗಳ ಆರಂಭದಲ್ಲಿ ಧಾರಾಕಾರವಾಗಿ ಸುರಿದ ಹುಬ್ಬೆ ಮಳೆಗೆ ಈರುಳ್ಳಿ ಬೆಳೆ ನೀರು ಹೆಚ್ಚಾಗಿ ಕೊಳೆಯುವಂತೆ ಮಾಡಿದೆ. ಹೀಗಾಗಿ ಚಳ್ಳಕೆರೆ ತಾಲೂಕಿನ ಹಿರೆಮಧುರೆ ಗ್ರಾಮದ ರೈತ ಬಸವರಾಜ್ ಈರುಳ್ಳಿ ಬೆಳೆಯನ್ನ ಟ್ರಾಕ್ಟರ್ ಬಳಸಿ ಕಿತ್ತು ನಾಶಮಾಡುತ್ತಿದ್ದು, ಮತ್ತೊಂದು ಕಡೆ ಹಿರಿಯೂರು ತಾಲ್ಲೂಕಿನ ಯಳಗೊಂಡನಹಳ್ಳಿ ರೈತ ನಿಜಲಿಂಗಪ್ಪ ತೇವಾಂಶ ಹೆಚ್ಚಾಗಿ ಬೆಳವಣಿಗೆ ಕುಂಠಿತವಾದ ಪರಿಣಾಮ ಈರುಳ್ಳಿಯನ್ನು ಕಟಾವು ಮಾಡಿ ಟ್ರ್ಯಾಕ್ಟರ್ ನಲ್ಲಿ ತುಂಬಿ ಜಮೀನಿಗೆ ಚಲ್ಲಿದ್ದಾರೆ. ಮೊದಲೇ ಬರಗಾಲಕ್ಕೆ ಸಿಲುಕಿ ಸಾಲಗಾರರಾಗಿದ್ದ ಚಿತ್ರದುರ್ಗ ಜಿಲ್ಲೆಯ ರೈತರಿಗೆ ಹುಬ್ಬೆ ಮಳೆ ಶಾಪವಾಗಿ ಪರಿಣಮಿಸುವ ಮೂಲಕ ಮತ್ತೆ ಜಿಲ್ಲೆಯ ಈರುಳ್ಳಿ ಬೆಳೆಗಾರರನ್ನ ಸಾಲದ ಕೂಪಕ್ಕೆ ತಳ್ಳಿದ್ದು, ಸರ್ಕಾರ ನಮ್ಮ ನೆರವಿಗೆ ಬರಬೇಕು ಎಂದು ರೈತರು ಮನವಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ-ಸಚಿವ ಶ್ರೀರಾಮುಲು : ಚಿತ್ರದುರ್ಗ ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಮಳೆ ಬಂದು ಬೆಳೆ ಹಾನಿ ಆಗಿದ್ದು ಚಿತ್ರದುರ್ಗ ಜಿಲ್ಲೆಯನ್ನು ಅತಿವೃಷ್ಟಿ ಮತ್ತು ಪ್ರವಾಹ ಪೀಡಿತ ಜಿಲ್ಲೆ ಎಂದು ಘೋಷಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜತೆಯಲ್ಲಿ ಜಿಲ್ಲೆಯ ಎಲ್ಲ ಶಾಸಕರೊಟ್ಟಿಗೆ ಮಾತನಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಈರುಳ್ಳಿ, ಶೇಂಗಾ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಮಳೆಯಿಂದ ನಾಶವಾಗಿ ರೈತರಿಗೆ ತುಂಬಲಾರದ ನಷ್ಟವಾಗಿದೆ. ಈವರೆಗೂ ಸುಮಾರು 7,302 ಹೆಕ್ಟರ್ ಪ್ರದೇಶದಲ್ಲಿ 9 ಕೋಟಿ 87 ಲಕ್ಷ ರೂಪಾಯಿಗಳ ಮೊತ್ತದಷ್ಟು ನಷ್ಟವಾಗಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ.
ಜನ, ಜಾನುವಾರು ಮತ್ತು ಮೂಲ ಸೌಕರ್ಯ ಸೇರಿದಂತೆ ಅಂದಾಜು 91 ಕೋಟಿ 87 ಲಕ್ಷ ರೂಪಾಯಿಗಳ ನಷ್ಟವಾಗಿದೆ ಎಂದು ತಿಳಿದಿದ್ದು, ನಷ್ಟದ ಸಮೀಕ್ಷೆ ಕಾರ್ಯ ಮುಂದುವರೆದಿದೆ. ನಷ್ಟ ಹೊಂದಿರುವ ಯಾವುದೇ ರೈತನೂ ಬೆಳೆ ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಲಾಗುವುದು. ನಮ್ಮ ಸರ್ಕಾರ ರೈತರ ಜೊತೆಗಿದ್ದು, ಯಾರೂ ದೃತಿಗೆಡಬೇಕಿಲ್ಲ ಎಂದು ಶ್ರೀರಾಮುಲು ರೈತರಿಗೆ ಧೈರ್ಯ ಹೇಳಿದ್ದಾರೆ.