ಆನೇಕಲ್ : ಶ್ವೇತಾ ಎಂಬ ಗೃಹಿಣಿಯನ್ನು ಈ ತಿಂಗಳ 20 ರಂದು ಕೊಲೆ ಮಾಡಿ, ಮನೆಯಲ್ಲಿ ಕಳ್ಳತನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೋಲಿಸರು ಆರೋಪಿಗಳಿಗೆ ಗುಂಡಿನ ರುಚಿ ತೋರಿಸಿದ್ದಾರೆ. ಈ ಹಿಂದೆ ಆನೇಕಲ್ ತಾಲೂಕು ವ್ಯಾಪ್ತಿಯ ಸಿಂಗೇನಅಗ್ರಹಾರ ಬಳಿ ಕೊಲೆ ಮಾಡಿ ಮನೆಯಲ್ಲಿ ಕಳ್ಳತನ ಮಾಡಿರುವ ಘಟನೆ ನಡೆದಿತ್ತು.
ಈ ಪ್ರಕರಣ ಗಂಭೀರವಾಗಿ ಪರಿಗಣಿಸಿದ ಆನೇಕಲ್ ಪೋಲಿಸರು ಆರೋಪಿಗಳ ಬೆನ್ನು ಹತ್ತಿ ನಿನ್ನೆ ರಾತ್ರಿ ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರು ಎನ್ನಲಾಗಿದೆ. ಹೀಗಾಗಿ ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಹೆಬ್ಬಗೋಡಿ ಪಿಎಸ್ಐ ಗೌತಮ್ ಮತ್ತು ಬನ್ನೇರುಘಟ್ಟ ಪಿಎಸ್‌ಐ ಗೋವಿಂದ್ ಫೈರಿಂಗ್ ಮಾಡಿದ್ದಾರೆ. ಮುತ್ಯಾಲಮಡು ಬಳಿ ವೇಲು ಅಲಿಯಾಸ್ ಸೈಕೋ (23), ಬಾಲಕೃಷ್ಣ ಅಲಿಯಾಸ್ ಬಾಲ (27) ವರ್ಷ ಕಾಲಿಗೆ ಗುಂಡೇಟು ಹೊಡೆತಕ್ಕೆ ಸಿಲುಕಿದ್ದಾರೆ.
ಆರೋಪಿಗಳಿಬ್ಬರು ಬೆಂಗಳೂರು ಸುತ್ತಮುತ್ತ ರಾಬರಿ ಮತ್ತು ಕೊಲೆ ಮಾಡಿದ್ದು ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಘಟನೆಯಲ್ಲಿ ಪೋಲೀಸ್ ಕಾನ್ಸ್ ಟೇಬಲ್ ಶಿವಕುಮಾರ್ ಅವರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.