ಕನ್ನಡ ಸಾಹಿತ್ಯ ಮಾನವೀಯ ಮೌಲ್ಯಗಳ ಆಗರ : ಡಾ.ಡಿ.ಸಿ.ಚಿತ್ರಲಿಂಗಯ್ಯ

ಬೆಂಗಳೂರು : ಕನ್ನಡ ಸಾಹಿತ್ಯ ನಿಂತ ನೀರಾಗದೆ ಸದಾ ಹರಿಯುವ ನೀರಿನಂತೆ ಚಲನಶೀಲತೆಯನ್ನು ಮತ್ತು ಸೃಜನಶೀಲತೆಯನ್ನು ಹೊಂದಿದೆ ಎಂದು ಪ್ರಾಂಶುಪಾಲ ಡಾ. ಡಿ.ಸಿ. ಚಿತ್ರಲಿಂಗಯ್ಯ ಹೇಳಿದರು.
ನಗರದ ಶ್ರೀ ಲಕ್ಷ್ಮೀ ಕಾಲೇಜು ಆಫ್ ಮ್ಯಾನೇಜ್ಮೆಂಟ್ ಅಂಡ್ ಸೈನ್ಸ್ ಆಯೋಜಿಸಿದ್ದ ” ಕನ್ನಡ ಸಾಹಿತ್ಯದ ಅನನ್ಯತೆ ” ಎಂಬ ಕನ್ನಡ ವಿಚಾರದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸ ನೀಡಿದ ಅವರು ಚರಿತ್ರೆಯ ಅರಿವಿನಿಂದ ತನ್ನ ವಿವೇಕವನ್ನು ಜಾಗೃತಿಗೊಳಿಸಿಕೊಂಡು ವರ್ತಮಾನವನ್ನು ಸಮರ್ಥವಾದ ರೀತಿಯಲ್ಲಿ ಕಟ್ಟಿಕೊಡುವ ಕನ್ನಡ ಸಾಹಿತ್ಯವು ಮಾನವೀಯ ಮೌಲ್ಯಗಳ ಆಗರವಾಗಿದೆ ಎಂದರು.
ಈಗಿನ ಸಮಾಜದಲ್ಲಿರುವ ಜಾತೀಯತೆ, ವರ್ಣಸಮಸ್ಯೆ, ಭ್ರಷ್ಟಚಾರ, ಮೂಢನಂಬಿಕೆ, ಮತೀಯ ಸಂಘರ್ಷ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಕನ್ನಡ ಸಾಹಿತ್ಯವು ದಿವ್ಯೌಷಧವಾಗಿದೆ.ಹಾಗಾಗಿ ಕನ್ನಡ ಸಾಹಿತ್ಯದ ಅನನ್ಯತೆಯನ್ನು ಪದೆ ಪದೆ ನಾವು ಮೆಲುಕು ಹಾಕುವ ಅನಿವಾರ್ಯತೆ ಇದೆ ಎಂದರು.
ಪರ ವಿಚಾರಗಳನ್ನು, ಅನ್ಯ ಧರ್ಮಗಳನ್ನು ಸಹಿಸುವ ಮನಸ್ಸಿನ ಗುಣದ ಬಗ್ಗೆ ಹೇಳುವ ಕವಿರಾಜಮಾರ್ಗಕಾರನ ಮಾತು ಮಾನವೀಯ ಮೌಲ್ಯಗಳಿಗೆ ಕನ್ನಡಿ ಹಿಡಿದಿದೆ.ಮಾನವೀಯ ಮೌಲ್ಯಗಳ ಬೆಸುಗೆಯಾಗಿ ಶ್ರೀ ಸಾಮಾನ್ಯನ ಗಮನವನ್ನು ಸೆಳೆದ ಕನ್ನಡ ಸಾಹಿತ್ಯವು ಅಡಂಬರ ಮತ್ತು ಡಾಂಭಿಕತೆಯ ಜೀವನಕ್ಕಿಂತ ನೈತಿಕ ನೆಲೆಗಟ್ಟಿನ ಜೀವನ ನಮಗೆ ಬಹಳ ಮುಖ್ಯವಾದದೆಂಬುದನ್ನು ಮನವರಿಕೆ ಮಾಡಿಕೊಟ್ಟಿದೆ.
ಮುಸ್ಲಿಂ ಸಂವೇದನೆ, ಸ್ತ್ರೀ ಸಂವೇದನೆ ಹಾಗೂ ವಿವಿಧ ಸ್ತರಗಳಿಂದ ಬಂದ ಸೃಜನಶೀಲ ಲೇಖಕರ ಅನುಭವದಿಂದಾಗಿ ಕನ್ನಡ ಸಾಹಿತ್ಯವು ಸಮೃದ್ಧಿಯಾಗುವುದರ ಜೊತೆಗೆ ಬೇರೆ ಭಾಷೆಗಳಿಗೂ ಮಾದರಿಯಾಗಿದೆ. ಹೀಗೆ ಅನೇಕ ಅನುಭವ ಪ್ರಪಂಚಗಳ ಅನಾವರಣದಿಂದ ಸಾಹಿತ್ಯದ ಸೀಮಾರೇಖೆಗಳು ವಿಸ್ತಾರವಾಗಿರುವುದರ ಜೊತೆಗೆ ಸಂಸ್ಕೃತಿಯ ಬಹುಮುಖತೆಯನ್ನು ಸಮರ್ಥವಾದ ರೀತಿಯಲ್ಲಿ ಪರಿಚಯಿಸಿರುವುದನ್ನು ಗಮನಿಸಬಹುದು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ.ಜೋಸಫ್ ರವಿಯವರು ಮಾತನಾಡಿ ಕನ್ನಡ ಸಾಹಿತ್ಯವು ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಭಾಷೆಯಾಗಿದ್ದು, ಈ ಭಾಷೆ ಮನುಷ್ಯನಿಗೆ ಉತ್ತಮ ನೈತಿಕ ಮೌಲ್ಯಗಳನ್ನು ಪರಿಚಯಿಸಿ ಈ ಮೂಲಕ ಆತನ ಬದುಕಿಗೆ ವಿಶಿಷ್ಟವಾದ ಅರ್ಥವನ್ನು ನೀಡಿದೆ.ವಿದ್ಯಾರ್ಥಿಗಳು ತಮ್ಮ ಬಿಡುವಿನ ವೇಳೆಯಲ್ಲಿ ಕನ್ನಡ ಸಾಹಿತ್ಯದ ಕೃತಿಗಳನ್ನು ಓದಬೇಕು ಎಂದರು.ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿಯಾದ ಕ್ಲಾರಾ ರಾಬರ್ಟ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published.

Send this to a friend