ಸಾಹಿತ್ಯದಿಂದ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ತುಂಬುತ್ತದೆ : ಡಾ.ವಡ್ಡಗೆರೆ ನಾಗರಾಜಯ್ಯ

ಬೆಂಗಳೂರು ಜುಲೈ 02 : ಸಾಹಿತ್ಯ ವ್ಯಕ್ತಿಯಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಸಮಾಜದ ಬದಲಾವಣೆಗೆ ಕಾರಣವಾಗುತ್ತದೆ. ಬುಡಕಟ್ಟು ಸಮುದಾಯದ ಸಾಂಸ್ಕೃತಿಕ ನಾಯಕರ ಕುರಿತಾದ ಜನಪದ ಸಾಹಿತ್ಯವು ವ್ಯಕ್ತಿಗೆ ತ್ಯಾಗ, ಪ್ರಾಮಾಣಿಕತೆ ಮತ್ತು ನೈತಿಕ ಮೌಲ್ಯಗಳನ್ನು ಮನವರಿಕೆ ಮಾಡಿಕೊಡುತ್ತದೆ. ಈ ಮೂಲಕ ಸಾಹಿತ್ಯ ಸಾಮಾಜಿಕ ಆರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಸಂಸ್ಕೃತಿ ಚಿಂತಕರಾದ ಡಾ. ವಡ್ಡಗೆರೆ ನಾಗರಾಜಯ್ಯ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ, ತುಮಕೂರು, ವಿದ್ಯಾ ಶಿಕ್ಷಣ ಸಂಸ್ಥೆ , ತುಮಕೂರು , ಲೊಯೋಲ ಪದವಿ ಕಾಲೇಜು, ಬೆಂಗಳೂರು ಹಾಗೂ ಈಳ್ಳೇವು ಪ್ರಕಾಶನ , ತುಮಕೂರು ಇವರ ಸಹಯೋಗದೊಂದಿಗೆ ನಡೆದ ಯುವ ವಿಮರ್ಶಕ ಡಾ.ಡಿ.ಸಿ.ಚಿತ್ರಲಿಂಗಯ್ಯ ಸಂಪಾದಿತವಾದ ಸಂಸ್ಕೃತಿ ಚಿಂತಕರಾದ ಡಾ.ಕೆ.ತಿಮ್ಮಯ್ಯ ಅವರ ಸಮಗ್ರ ಸಾಹಿತ್ಯ ಕುರಿತಾದ “ಬೆಳಗೆ ಸಾಲು” ಕೃತಿ ಆನ್ಲೈನ್ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು “ಆದಿಮ ಸಮುದಾಯದಲ್ಲಿನ ಭಾಷಾ ವೈಶಿಷ್ಟ್ಯತೆಯು ಈ ಕೃತಿಯಲ್ಲಿ ಸೊಗಸಾಗಿ ಮೂಡಿಬಂದಿದೆ” ಎಂದು ಹೇಳಿದರು.

ನಂತರ ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕರಾದ ಡಾ.ಸತೀಶ್ ಚಂದ್ರ ಅವರು ಸಂಶೋಧನೆಯನ್ನು ಪದವಿಗಾಗಿ ಮಾಡುವುದಲ್ಲ, ಅದನ್ನು ತಮ್ಮ ಅರಿವಿನ ವಿಸ್ತಾರಕ್ಕಾಗಿ ಮಾಡಬೇಕಾಗುತ್ತದೆ. ಈ ಕೃತಿಯಲ್ಲಿ ಒಟ್ಟು ಹದಿನಾರು ಲೇಖನಗಳಿದ್ದು ಇದರಲ್ಲಿ ಜೀವನಚರಿತ್ರೆ, ಜನಪದ, ಗ್ರಂಥ ಸಂಪಾದನೆ, ವಿಮರ್ಶೆ, ಕತೆ ಹೀಗೆ ಅನೇಕ ಪ್ರಕಾರಗಳಿಗೆ ಸಂಬಂಧಿತವಾದ ಲೇಖನಗಳು ಸಂಕಲನಗೊಂಡಿವೆ. ಇಲ್ಲಿನ ಬರೆಹಗಳು ಯಾವುದನ್ನು ಅತಿರೇಕಮಾಡದೆ, ಹಾಗೆಯೇ ಯಾವುದನ್ನು ಅಲಕ್ಷ್ಯ ಮಾಡದೆ ಆರೋಗ್ಯಕರವಾದ ಹಾಗೂ ಸಮಂಜಸವಾದ ರೀತಿಯಲ್ಲಿ ಚರ್ಚಿಸಿರುವುದನ್ನು ಕಾಣಬಹುದು. ಸಾಂಸ್ಕೃತಿಕ ಅಸ್ಮಿತೆಯನ್ನು , ಬುಡಕಟ್ಟಿನ ಭಾಷಾ ಶೈಲಿಯನ್ನು, ಸಭಾಲ್ಟ್ರನ್ ವಸ್ತುವನ್ನು ಹಾಗೂ ಜಾನಪದ ಲೋಕದ ವಿರಾಟ ದರ್ಶನವನ್ನು ಕೃತಿ ಓದುಗರಿಗೆ ಸೊಗಸಾಗಿ ಪರಿಚಯಿಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬ.ಹ . ರಮಾಕುಮಾರಿ ಮಾತನಾಡಿ “ಉಪಸಂಸ್ಕೃತಿಯ ಭಾಗವಾಗಿ ಬಂದ ಸಂಸ್ಕೃತಿಯ ಆಚರಣೆಗಳು ಇಂದು ಮಾಯವಾಗುತ್ತಿವೆ. ಇವುಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗುತ್ತದೆ. ಈ ನೆಲೆಯಲ್ಲಿ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ಮಾಡುವ ಗುರಿಯನ್ನು ಸಂಶೋಧಕರು ಹೊಂದಬೇಕು” ಎಂದರು.

ನಂತರ ಮಾತನಾಡಿದ ಗುಬ್ಬಿಯ ಚನ್ನಬಸವೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕರಾದ ಡಾ. ಪ್ರಿಯಾಂಕ ಎಮ್.ಜಿ ಅವರು ಇಂದು ಆಧುನಿಕತೆಯ ಪ್ರಭಾವದಿಂದ ದೇಸಿತನ ಕಣ್ಮರೆಯಾಗುತ್ತಿದೆ. ಹಾಗಾಗಿ ಇಂತಹ ಕೃತಿಗಳಿಂದ ದೇಸಿತನದ ವೈಶಿಷ್ಟ್ಯತೆಯನ್ನು ತಿಳಿಯಲು ಸಾಧ್ಯವೆಂದರು.
ಕಾರ್ಯಕ್ರಮದಲ್ಲಿ ಲೊಯೋಲ ಪದವಿ ಕಾಲೇಜಿನ ಪ್ರಾಂಶುಪಾಲರಾದ ವಂ.ಫಾ. ಪ್ರಾನ್ಸಿಸ್ ಡಿ.ಅಲ್ಮೇಡಾ ಯೇ.ಸ , ವಿದ್ಯಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಶ್ರೀ ಅರ್ಜನ್ ಹೆಚ್.ಎ,ಸಂಸ್ಕೃತಿ ಚಿಂತಕರಾದ ಡಾ.ಕೆ.ತಿಮ್ಮಯ್ಯ ಉಪಸ್ಥಿತರಿದ್ದರು. ಅಂತರಾಷ್ಟ್ರೀಯ ಜಾನಪದ ಗಾಯಕರಾದ ಶ್ರೀ ಅಮ್ಮ ರಾಮಚಂದ್ರ ಅವರು ಪ್ರಾರ್ಥಿಸಿದರು. ಯುವ ವಿಮರ್ಶಕ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ನಿರೂಪಿಸಿದರು. ಕೃತಿಯ ಸಂಪಾದಕರಾದ ಡಾ.ಡಿ.ಸಿ.ಚಿತ್ರಲಿಂಗಯ್ಯ ವಂದಿಸಿದರು.

Leave a Reply

Your email address will not be published.

Send this to a friend