ಮೊದಲ ಹಂತದಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿದೆ ಕೊರೋನಾ ಲಸಿಕೆ.

ಬೆಂಗಳೂರು : ಭಾರತೀಯ ಕಂಪನಿಗಳು ತಯಾರಿಸಿದ ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡೂ ಲಸಿಕೆಗಳನ್ನು ದೇಶದ 3 ಕೋಟಿ ಜನರಿಗೆ ಉಚಿತವಾಗಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಕೇಂದ್ರ ಸರ್ಕಾರವೇ ವೆಚ್ಚವನ್ನು ಭರಿಸಲಿದೆ. ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ‌ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಚಿವ ಡಾ.ಕೆ.ಸುಧಾಕರ್ ಸಭೆಯಲ್ಲಿ ಭಾಗವಹಿಸಿದರು.

ಸಭೆ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ರಾಜ್ಯದಲ್ಲಿ ಮೊದಲ ಹಂತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಕೊರೊನಾ ಯೋಧರು, ಪೊಲೀಸರು, ಗ್ರಾಮೀಣಾಭಿವೃದ್ಧಿ ಸೇರಿದಂತೆ ಇತರೆ ಇಲಾಖೆಗಳ ಸಿಬ್ಬಂದಿ ಸೇರಿ 16 ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.
ಲಸಿಕೆಯ ಮೊದಲ ಡೋಸ್ ಪಡೆದ 28 ದಿನಗಳ ಬಳಿಕ ಮತ್ತೊಂದು ಡೋಸ್ ಪಡೆಯಬೇಕು ಎಂದು ತಿಳಿಸಲಾಗಿದೆ. ಅಂದರೆ, 45 ದಿನಗಳ ಬಳಿಕ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗುತ್ತದೆ. ಅಲ್ಲಿಯವರೆಗೆ ಎಚ್ಚರದಿಂದಿರಬೇಕು ಎಂದು ಪ್ರಧಾನಿಗಳು ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.

ಲಸಿಕೆಯ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ. ಈ ಲಸಿಕೆ ಸುರಕ್ಷಿತವಾಗಿದ್ದು, ಕ್ಲಿನಿಕಲ್ ಟ್ರಯಲ್ ಗಳನ್ನು ಮಾಡಲಾಗಿದೆ. ರಾಜ್ಯ ಸರ್ಕಾರ ಎಲ್ಲ ಬಗೆಯ ಸಿದ್ಧತೆಗಳನ್ನು ಮಾಡಿದ್ದು, ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ ವಾಕ್- ಇನ್ ಫ್ರೀಜರ್ ನೀಡಲಿದೆ. ಲಸಿಕೆಯನ್ನು ಜಿಲ್ಲೆಗಳಿಗೆ ಕಳುಹಿಸಿಕೊಡಲಾಗುತ್ತದೆ. ಜನವರಿ 16 ರಿಂದ ಲಸಿಕೆಯ ವಿತರಣೆ ನಡೆಯಲಿದೆ ಎಂದರು.

ಆರೋಗ್ಯ ಸಿಬ್ಬಂದಿಗೆ ಲಸಿಕೆ ಕೊಟ್ಟ ಬಳಿಕ 50 ವರ್ಷ ಮೇಲ್ಪಟ್ಟವರು ಹಾಗೂ ಇತರೆ ರೋಗ ಇರುವವರನ್ನು ಗುರುತಿಸಿ ಅವರಿಗೆ ಲಸಿಕೆ ನೀಡಬೇಕೆಂದು ಕೇಂದ್ರ ಸರ್ಕಾರ ಸೂಚಿಸಿದೆ. ರಾಜ್ಯದಲ್ಲಿ ಲಸಿಕೆ ಸಂಗ್ರಹ ಮತ್ತು ವಿತರಣೆಗೆ ಸಿದ್ಧತೆ ಪೂರ್ಣಗೊಂಡಿದ್ದು, ಯಾವುದೇ ಲೋಪಗಳಾಗದಂತೆ ಎಚ್ಚರ ವಹಿಸಲಾಗಿದೆ ಎಂದರು‌.

ಯು.ಕೆ.ಯಿಂದ ಬಂದ ಕೆಲ ವಿದೇಶಿಯರು ಆ ದೇಶದ ಪಾಸ್ ಪೋರ್ಟ್ ತಂದಿದ್ದು, ಸ್ಥಳೀಯ ಸಂಪರ್ಕ ಸಂಖ್ಯೆ ಲಭ್ಯವಿಲ್ಲ. ಬೇರೆ ಊರಿಗೂ ಪ್ರಯಾಣ ಮಾಡಿರುವ ಸಾಧ್ಯತೆ ಇದ್ದು, ಕೇಂದ್ರ ಗೃಹ ಇಲಾಖೆಗೆ ವಿವರ ನೀಡಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published.

Send this to a friend