ಬೆಂಗಳೂರು : ಸಂಶೋಧನೆ ಎಂಬುವುದು ನಮ್ಮ ಅರಿವಿನ ವಿಸ್ತಾರಕ್ಕೆ ದಾರಿ ತೋರಿಸಬೇಕು ಹಾಗೂ ಸಂಶೋಧನೆಯು ವರ್ತಮಾನದ ವಿಚಾರಗಳಿಗೆ ಹೆಚ್ಚು ಹೆಚ್ಚು ಮುಖಾಮುಖಿಯಾಗಿ ಇರಬೇಕು ಎಂದು ಖ್ಯಾತ ಸಾಹಿತಿ ಡಾ. ಸಿದ್ದಲಿಂಗಯ್ಯ ಅಭಿಮತ ವ್ಯಕ್ತಪಡಿಸಿದರು. ಬೆಂಗಳೂರು ನಗರದ “ಲೊಯೋಲ ಪದವಿ ಕಾಲೇಜು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆದ ” ಕನ್ನಡ ಸಂಶೋಧನೆ, ಸಮಕಾಲೀನ ಸವಾಲುಗಳು” ಎಂಬ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತ್ತೀಚಿಗೆ ನಡೆಯುತ್ತಿರುವ ಸಂಶೋಧನೆಗಳು ಅಕಾಡೆಮಿಕ್ ವಲಯಕ್ಕೆ ಸೀಮಿತವಾಗಿವೆ ಇದರಿಂದ ಸಮಾಜಕ್ಕೆ ಯಾವುದೇ ರೀತಿಯ ಪ್ರಯೋಜನವಾಗುತ್ತಿಲ್ಲ ಎಂದು ತಿಳಿಸಿದರು.
ವಿಜ್ಞಾನ ವಿಷಯದಲ್ಲಿ ನಡೆಯುವ ವಸ್ತು ನಿಷ್ಟತೆಯ ಸಂಶೋದನೆಗಳು, ಕಲಾ ವಿಷಯದಲ್ಲಿ ನಡೆಯದೆ ಇರುವುದನ್ನು ಪ್ರಜ್ಞಾವಂತರಾದ ನಾವೆಲ್ಲರು ಗಂಭೀರವಾಗಿ ಗಮನಿಸಬಹುದಾಗಿದೆ. ಹಾಗಾಗಿ ಸಂಶೋಧನೆಯು ವರ್ತಮಾನದ ವಿಚಾರಗಳಿಗೆ ಮುಖಾಮುಖಿಯಾಗಿ ಇರಬೇಕು ಎಂದರು.
ಬೀದಿ ವ್ಯಾಪಾರಿಗಳ ಸಮಸ್ಯೆಗಳ ಬಗ್ಗೆ ಮತ್ತು ಅದಿವಾಸಿ ಜನರ ಬಗ್ಗೆ ಖುದ್ದಾಗಿ ಮಾಡುವ ಕ್ಷೇತ್ರಕಾರ್ಯದ ಸಂಶೋಧನೆಯಿಂದ ನಾವು ಸರ್ಕಾರದ ಗಮನವನ್ನು ಸೆಳೆದು ಈ ನೆಲೆಯಲ್ಲಿ ಅವರಿಗೆ ಪರಿಹಾರ ಸೂಚಿಸಬಹುದಾಗಿದೆ. ಹಾಗೆಯೇ ಕನ್ನಡ ಸಾಹಿತ್ಯಕ್ಕೆ ಕ್ರೈಸ್ತ ಮಿಷನರಿಗಳ ಕೊಡುಗೆ ಅಪಾರವಾದುದಾಗಿದೆ. ಇಂತಹ ವಿಚಾರಗಳ ಸಂಶೋಧನೆಯಿಂದ ಕನ್ನಡ ಸಾಹಿತ್ಯದ ಅನನ್ಯತೆಯನ್ನು ತಿಳಿಯಬಹುದು. ಇತ್ತೀಚಿನ ದಿನಗಳಲ್ಲಿ ಸಂಶೋಧಕರು ಸಂಶೋಧನೆಯ ಸಂದರ್ಭದಲ್ಲಿ ವಿಷಯದ ಆಯ್ಕೆಯಲ್ಲಿಯೇ ಎಡವುತ್ತಾರೆ. ಇದರಿಂದ ಅವರ “ಸಂಶೋಧನೆಯು ಚಲನಶೀಲತೆಯಿಂದ ಕೂಡಿರದೆ ಜಡತ್ವಕ್ಕೆ ಮುಖಮಾಡುತ್ತದೆ”. ಇಂತಹ ಸನ್ನಿವೇಶದಲ್ಲಿ ಬಹಳ ಶಿಸ್ತಿನಿಂದ ಶಂಶೋಧನೆ ಮಾಡಿರುವ ಡಾ.ಕುಮಾರಸ್ವಾಮಿ ಬೆಜ್ಜಿಹಳ್ಳಿ ಅವರ ಸಂಶೋಧನೆಯು ನಿಜಕ್ಕೂ ಶ್ಲಾಘನೀಯವಾದದ್ದು ಎಂದರು ಹೇಳಿದರು.
ವಿಶ್ರಾಂತ ಕುಲಪತಿಗಳಾದ ಡಾ.ಹಿ.ಚಿ.ಬೋರಲಿಂಗಯ್ಯ ಕಾರ್ಯಕ್ರಮದ ಆಶಯ ಭಾಷಣ ಮಾಡಿದರು. ಈ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಸುಮಾರು ಎಂಭತ್ತಕ್ಕೂ ಹೆಚ್ಚು ಪ್ರಬಂಧ ಮಂಡನಕಾರರು ತಮ್ಮ ಸಂಶೋಧನ ಲೇಖನಗಳನ್ನು ಮಂಡಿಸಿದರು.
ಈ ಕಾರ್ಯಕ್ರಮದಲ್ಲಿ ವಾಗ್ಮಿಗಳಾದ ಡಾ. ಡಿ.ಸಿ. ಚಿತ್ರಲಿಂಗಯ್ಯ ಡಾ.ಬೈರಮಂಗಲ ರಾಮೇಗೌಡ, ಡಾ.ವಡ್ಡಗೆರೆ ನಾಗರಾಜಯ್ಯ, ಜಿ.ಟಿ. ನರೇಂದ್ರಕುಮಾರ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.