ಗಾಂಧಿಯವರ ಚಿಂತನೆಗಳಿಂದ ಬದುಕು ರೂಪಿಸಿಕೊಳ್ಳಿ : ಶ್ರೀ ರಾಜೇಶ್ ಪದ್ಮಾರ್.

ಬೆಂಗಳೂರು (ಸೆಪ್ಟೆಂಬರ್ 29) : ಭಾರತೀಯ ಚಿಂತನೆಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿವೆ.‌ಆದರೆ ಈ‌ ಎಲ್ಲಾ ಚಿಂತನೆಗಳು ಬೇರೆ ಬೇರೆ ಅಲ್ಲ, ಅವೆಲ್ಲವೂ ಪರಸ್ಪರ ಒಂದಕ್ಕೊಂದು ಪೂರಕವಾಗಿವೆ. ಯುವಕರು ಗಾಂಧಿಯವರ ಚಿಂತನೆಗಳಿಂದ ಬದುಕು ರೂಪಿಸಿಕೊಂಡರೆ ಆರೋಗ್ಯಕರವಾದ ಜೀವನ ಕಾಣಬಹುದು. ಗಾಂಧೀಜಿಯವರು ಶ್ರೇಷ್ಠ ಚಿಂತನೆಗಳನ್ನು ಜಗತ್ತಿಗೆ ಸಮರ್ಥವಾಗಿ ಪರಿಚಯಿಸಿದ್ದಾರೆ. ನಮ್ಮ ದೇಶದ ವೈವಿಧ್ಯತೆಯನ್ನು ಉಳಿಸಿಕೊಳ್ಳಲು ನಾವು ಪುನಃ ಗಾಂಧಿ ವಿಚಾರಗಳ ಸತ್ವವನ್ನು ಅರಿಯಬೇಕಾಗಿದೆ
ಗಾಂಧಿಯವರ ಚಿಂತನೆಗಳು ಸಾರ್ವಕಾಲಿಕ ಚಿಂತನೆಗಳಾಗಿವೆ.
ಅಲ್ಲದೆ ದೇಶದ ಪ್ರಗತಿಗೆ ಗಾಂಧಿಯವರ ಚಿಂತನೆಗಳು ಅತ್ಯಗತ್ಯ ಎಂದು ಉಪನ್ಯಾಸಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶ್ರೀ ರಾಜೇಶ್ ಪದ್ಮಾರ್ ತಿಳಿಸಿದರು.

ನಗರದ ಆರ್. ಎನ್. ಎಸ್. ಪ್ರಥಮ ದರ್ಜೆ ಕಾಲೇಜು ಹಾಗೂ ಗಾಂಧಿ ಶಾಂತಿ ಪ್ರತಿಷ್ಠಾನ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ” ಗಾಂಧಿ ಚಿಂತನೆಗಳಲ್ಲಿ ಯುವ ‌ಜನಾಂಗದ ಭವಿಷ್ಯ” ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು. ಗಾಂಧೀಜಿಯವರು ಸಾಮಾಜಿಕ ‌ಸುಧಾರಣೆಗೆ ಹೆಚ್ಚಿನ ಒತ್ತನ್ನು ನೀಡಿದರು. ದೇಶದ ಮುಂದೆ ತನ್ನ ಕುಟುಂಬದ ಹಿತವನ್ನು ಮರೆತರು. ಸಂತನಾಗಿ‌ ಹರಿಜನರ ಸೇವೆಯನ್ನು ಮಾಡಿದರು.ಸ್ವಭೂಷ,ಸ್ವಭಾಷಾ,ಸ್ವದೇಶಿ ಮತ್ತು ಸ್ವರಾಜ್ಯ ಈ ಅಂಶಗಳ ಅಡಿಯಲ್ಲಿ ದೇಶವನ್ನು ‌ಕಟ್ಟುವುದು ಅವರ ಉದ್ದೇಶವಾಗಿತ್ತು ಎಂದು ತಿಳಿಸಿದರು.

ಗಾಂಧಿಯವರ ಮಾತಿಗೆ ಇಡೀ ದೇಶವೇ ಮನ್ನಣೆ ನೀಡಿತು. ತ್ಯಾಗ, ಬಲಿದಾನದಿಂದ ಕಟ್ಟಿದ ಈ ದೇಶವನ್ನು ಶ್ರಮದ‌ ಮಹತ್ವ ಗೊತ್ತಿಲ್ಲದ ಯುವಕರು ಹಾಳು ಮಾಡುತ್ತಿದ್ದಾರೆ. ದೇಶಕ್ಕೆ ಮಾರಕವಾದ,ಅಭಿವೃದ್ಧಿಗೆ ಕುಂಠಿತವಾದ ವಿದ್ಯಾವಂತರಿಂದ ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಈ ಜಗತ್ತಿಗೆ ಸತ್ಯ, ಅಹಿಂಸೆ ‌ಹಾಗೂ ಪ್ರೀತಿಯನ್ನು ಬೋಧಿಸಿದ ಗಾಂಧಿಯವರ ‌ಚಿಂತನೆಗಳಿಂದ ಯುವಕರು ತಮ್ಮ ಬದುಕನ್ನು ಕಟ್ಟಿಕೊಂಡಾಗ ಮಾತ್ರ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ ಎಂದರು.

ಡಾ.ಸತ್ಯಮಂಗಲ ಮಹಾದೇವರವರು ಮಾತನಾಡಿ ಚಿಂತನೆಗಳು ಶ್ರೇಷ್ಠವಾಗಿದ್ದರೆ ಜಗತ್ತೆ ಅದಕ್ಕೆ ತಲೆಬಾಗುತ್ತದೆ.
ಸಾಮಾನ್ಯರನ್ನು‌ ಗೌರವದಿಂದ ನೋಡಿಕೊಳ್ಳುವುದರಲ್ಲಿ ನಮ್ಮ ಘನತೆ ಇರುತ್ತದೆ. ಸೇವೆಯಲ್ಲಿ ಸಾರ್ಥಕತೆ ಕಂಡು ನಿಸ್ವಾರ್ಥಿಯಾಗಿ ಬದುಕಿದವರು ಮಹಾತ್ಮ ಗಾಂಧಿಯವರಾಗಿದ್ದಾರೆ.ದೇಶದ ಹಿತಕ್ಕಾಗಿ ಗಾಂಧಿಯವರು ಉಪವಾಸ ಮಾಡಿದರು. ಅಲ್ಲದೆ ಅವರು ಸರಳತೆಯ ಪ್ರತೀಕವಾಗಿದ್ದರು. ವಿಶಾಲ ಚಿಂತನೆಗಳನ್ನು ಅಳವಡಿಸಿಕೊಂಡು ಮನುಷ್ಯರಾಗುವುದೆಂದರೆ ಗಾಂಧಿಯವರ ತತ್ವಗಳ ಜೊತೆ ನಡೆಯುವುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಹಾಗೂ ಬಸವ ಜ್ಯೋತಿ ಪ್ರಶಸ್ತಿ ಪುರಸ್ಕೃತರಾದ ಡಾ.ಸುಧೀರ್ ಪೈ ಕೆ.ಎಲ್. ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲರಾದ ಪ್ರೊ.ಶಿಲ್ಪಾ ಸರ್ನಾಡ್,ಆಡಳಿತ ಸಂಯೋಜನಾಧಿಕಾರಿಯಾದ ಪ್ರೊ.ಎನ್. ನಾಗರಾಜ, ಡಾ.ಡಿ.ಸಿ.ಚಿತ್ರಲಿಂಗಯ್ಯ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪ್ರೊ.ಜಾನಕಿರವರು ನಿರೂಪಿಸಿದರು.ಪ್ರೊ.ಪಲ್ಲವಿ ಪ್ರಾರ್ಥಿಸಿದರು.

Leave a Reply

Your email address will not be published.

Send this to a friend