ಚಿತ್ರದುರ್ಗ: ಹೊಸ ವರ್ಷಕ್ಕೆ ಕಾಲಿಟ್ಟ ಘಳಿಗೆಯಲ್ಲೇ ಚಳ್ಳಕೆರೆ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ರಾಜಕೀಯ ಕಿಚ್ಚು ಹತ್ತಿದೆ. ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಹೊಸ ವರ್ಷದ ಪ್ರಥಮ ಅಹಿತಕರ ಘಟನೆಯಾಗಿ ದಾಖಲಾಗಿದೆ.
ಗ್ರಾಮ ಪಂಚಾಯತಿ ಚುನಾವಣೆ ಫಲಿತಾಂಶ ಘೋಷಣೆಯಾದ ಬೆನ್ನಲ್ಲೇ ಹಳ್ಳಿಗಳಲ್ಲಿ ರಾಜಕೀಯ ದ್ವೇಷ ಸಹ ಶುರುವಾಗಿದೆ. ಇದಕ್ಕೆ ಚಳ್ಳಕೆರೆ ತಾಲೂಕಿನ ಸಾಣೀಕೆರೆ ಗ್ರಾಮದ ಹೋಟೆಲ್ಗೆ ಬೆಂಕಿ ಹಚ್ಚಿದ ಘಟನೆ ಸಾಕ್ಷಿಯಾಗಿದೆ.
ಸಾಣೀಕೆರೆ ಗ್ರಾಮದ ಬಸವರಾಜ್ ಎಂಬುವವರ ಹೋಟೆಲ್ ನಿನ್ನೆ ತಡರಾತ್ರಿ ಬೆಂಕಿಗೆ ಆಹುತಿಯಾಗಿದೆ. ಇದಕ್ಕೆ ರಾಜಕೀಯ ದ್ವೇಷವೇ ಕಾರಣ ಎನ್ನಲಾಗಿದೆ.
ಸಾಣೀಕೆರೆ ಗ್ರಾ.ಪಂ. ಚುನಾವಣೆಗೆ ಅಂಜು ಎಂ ಮತ್ತು ಬಿ.ಎ., ಕ್ಷಿತಿಜಾ ನಡುವೆ ತೀವ್ರ ಸ್ಪರ್ಧೆ ನಡೆದಿತ್ತು. ತಲಾ 376 ಮತ ಪಡೆದು ಇಬ್ಬರು ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು. ಚುನಾವಣಾ ಅಧಿಕಾರಿಗಳು ಇಬ್ಬರು ಅಭ್ಯರ್ಥಿಗಳ ಸಮಕ್ಷಮದಲ್ಲಿ ಟಾಸ್ ಹಾಕುವ ಮೂಲಕ ಅಂದರೆ ಲಾಟರಿ ಮೂಲಕ ಅಂಜು ಎಂ. ಅವರನ್ನು ಸದಸ್ಯೆಯಾಗಿ ಆಯ್ಕೆ ಮಾಡಿದ್ದರು.
ಫಲಿತಾಂಶ ಹೊರಬಿದ್ದು 24 ತಾಸಲ್ಲಿ ಅಂಜು ಎಂ. ಅವರ ಬೆಂಬಲಿಗ ಬಸವರಾಜ ಅವರ ಹೋಟೆಲ್ಗೆ ತಡರಾತ್ರಿ ಬೆಂಕಿ ಹಚ್ಚಲಾಗಿದೆ ಎನ್ನಲಾಗುತ್ತಿದೆ. ಪರಾಜಿತ ಅಭ್ಯರ್ಥಿ ಕ್ಷಿತಿಜಾ ಬೆಂಬಲಿಗರಿಂದ ಈ ಕೃತ್ಯ ನಡೆದಿದೆ ಎನ್ನುವ ಆರೋಪಗಳು ಸದ್ಯ ಗ್ರಾಮದಲ್ಲಿ ಕೇಳಿ ಬರುತ್ತಿವೆ. ಸಾಣಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಚುನಾವಣೆ ಬಳಿಕ ರಾಜಕೀಯ ಮರೆತು ಎಲ್ಲರೂ ಒಂದಾಗಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದರೆ ನಿಜಕ್ಕೂ ಮತ್ತೊಬ್ಬರಿಗೆ ಮಾದರಿಯಾಗುತ್ತಾರೆ. ಇಂತಹ ಘಟನೆಗಳು ಇಂದಿಗೆ ಕೊನೆಯಾಗಲಿ ಎಂಬುದು ನಮ್ಮ ಆಶಯವಾಗಿದೆ.