ತುಮಕೂರು : ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಯಳನಾಡುವಿನ ಕಾಚನಕಟ್ಟೆ, ಗಂಗಮ್ಮನ ಕೆರೆ ಸುತ್ತಮುತ್ತ ಸಾರ್ವಜನಿಕವಾಗಿ ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ಭೀತಿ ಉಂಟು ಮಾಡಿದ್ದ ಚಿರತೆಯೂ ಕಡೆಗೂ ಅರಣ್ಯ ಇಲಾಖೆಯವರು ನಡೆಸಿದ ಕಾರ್ಯಾಚರಣೆಯಲ್ಲಿ ಇಂದು ನಸುಕಿನ ಜಾವದಲ್ಲಿ ಬೋನಿನಲ್ಲಿ ಸೆರೆಸಿಕ್ಕಿದೆ.
ಗ್ರಾಮದ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದರಿಂದ ರೈತರು ಹೊಲಗಳಲ್ಲಿ ಕೆಲಸ ಮಾಡಲು ಆತಂಕ ಪಡುತ್ತಿದ್ದರು. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದು ಈ ಹಿನ್ನೆಲೆಯಲ್ಲಿ ಗ್ರಾಮದ ಸಮೀಪ ಅರಣ್ಯ ಇಲಾಖೆಯವರು ಬೋನನ್ನು ಇಟ್ಟಿದ್ದರು. ಆಹಾರವನ್ನು ಅರಸಿ ಬಂದ ಚಿರತೆ ಬೋನಿನಲ್ಲಿ ಸೆರೆ ಸಿಕ್ಕಿದ್ದು ಸುದ್ಧಿ ತಿಳಿದ ಕೂಡಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಸ್ಥಳಾಂತರಿಸಿದ್ದಾರೆ.