ಚಿತ್ರದುರ್ಗ : ಕೋವಿಡ್-19 ಲಸಿಕೆ ಹಾಕುವ ಪ್ರಯೋಗದ (ಡ್ರೈರನ್) ಅಣಕು ಲಸಿಕಾ ಅಧಿವೇಶನ ಜಿಲ್ಲೆಯ ಆರು ಕೇಂದ್ರಗಳಲ್ಲಿ ಶುಕ್ರವಾರ ನಡೆಯಿತು. ನಗರದ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಕೋವಿಡ್-19 ಲಸಿಕೆ ಕುರಿತು ಅಣಕು ಲಸಿಕಾ ಅಧಿವೇಶನಕ್ಕೆ ಚಾಲನೆ ನೀಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಅಣುಕು ಪ್ರದರ್ಶನವನ್ನು ಜಿಲ್ಲೆಯಲ್ಲಿ ಗುರುತಿಸಿದ ಆರು ಆರೋಗ್ಯ ಸೇವಾ ಸಂಸ್ಥೆಗಳಾದ ಚಿತ್ರದುರ್ಗ ಜಿಲ್ಲಾಸ್ಪತ್ರೆ, ಬುದ್ಧನಗರ ನಗರ ಆರೋಗ್ಯ ಕೇಂದ್ರ, ಜಿ.ಆರ್.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರ, ಚಿತ್ರದುರ್ಗ ಬಸವೇಶ್ವರ ಆಸ್ಪತ್ರೆ, ಹೊಸದುರ್ಗ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಣಕು ಪ್ರದರ್ಶನ ನೀಡಲಾಯಿತು.
ಈಗಾಗಲೇ ಕೋವ್ಯಾಕ್ಸಿನ್ ನೀಡಲು ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಲಸಿಕಾ ಅಧಿವೇಶನ ನಡೆಸಲು ಪೂರ್ವಸಿದ್ಧತೆಯ ಕೊನೆ ಘಟಕವೇ ಅಣಕು ಲಸಿಕಾ ಅಧಿವೇಶನ ಅಥವಾ ಡ್ರೈರನ್ ಎನ್ನುತ್ತಾರೆ. ಇಲ್ಲಿ ಲಸಿಕೆಯನ್ನು ಉಪಯೋಗಿಸದೇ ಲಸಿಕಾ ಅಧಿವೇಶನ ನಡೆಸಲಾಗುತ್ತದೆ.
ಲಸಿಕಾ ಅಧಿವೇಶನಗಳಲ್ಲಿ ಮೂರು ಪ್ರತ್ಯೇಕ ಕೊಠಡಿಗಳನ್ನು ಬಳಸಲಾಗುತ್ತದೆ. ಈಗಾಗಲೇ ನೊಂದಾಯಿತ ಫಲಾನುಭವಿಗಳ ದಾಖಲಾತಿ ಪರಿಶೀಲನೆ, ಲಸಿಕೆ ನೀಡುವ ಕೊಠಡಿ, ಲಸಿಕಾ ನಂತರ ಮೂವತ್ತು ನಿಮಿಷಗಳ ಕಾಲ ಫಲಾನುಭವಿಗಳ ನಿಗಾವಣೆ ವಿಶ್ರಾಂತಿ ಕೊಠಡಿಯಾಗಿರುತ್ತದೆ. ಒಂದು ಲಸಿಕಾ ಅಧಿವೇಶನದಲ್ಲಿ ಒಟ್ಟು ಐದು ಜನ ಲಸಿಕಾ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ.
ಕೋ ವ್ಯಾಕ್ಸಿನ್ ಲಸಿಕಾ ಅಧಿವೇಶನಗಳು ಕೋವಿನ್ ಕೋವಿಡ್ ವ್ಯಾಕ್ಸಿನ್ ಇಂಟಲಿಜೆಂಟ್ ನೆಟ್‍ವರ್ಕ್ ಅಡಿ ಕಾರ್ಯ ನಿರ್ವಹಣೆಯಾಗುತ್ತವೆ. ಎಲ್ಲಾ ಫಲಾನುಭವಿಗಳ ದತ್ತಾಂಶವನ್ನು ಗಣಕೀಕೃತವಾಗಿ ನಿರ್ವಹಣೆ ಮಾಡಲಾಗುತ್ತದೆ.
ಈ ಅಣಕು ಲಸಿಕಾ ಪ್ರದರ್ಶನವು ನಿಜ ಲಸಿಕಾ ಅಧಿವೇಶನಗಳನ್ನು ನಿರ್ವಹಿಸುವಾಗ ಈಗ ಕಂಡು ಬರುವ ನ್ಯೂನತೆಗಳನ್ನು ಸರಿಪಡಿಸಿ ಉತ್ತಮ ಸೇವೆ ನೀಡಲು ಸಹಕಾರಿಯಾಗಲಿದೆ.
ಅಪರ ಜಿಲ್ಲಾಧಿಕಾರಿ ಸಿ.ಸಂಗಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸಿ.ಎಲ್.ಫಾಲಾಕ್ಷ, ಆರ್‍ಸಿಹೆಚ್ ಅಧಿಕಾರಿ ಡಾ.ಕುಮಾರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿರಂಗನಾಥ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಂಜುನಾಥ್ ಸೇರಿದಂತೆ ಜಿಲ್ಲಾಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ಫೋಟೋ ವಿವರ: ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಅವರು ಕೋವಿಡ್-19 ಲಸಿಕೆ ಕುರಿತು ಅಣಕು ಲಸಿಕಾ ಅಧಿವೇಶನಕ್ಕೆ ಚಾಲನೆ ನೀಡಿದರು.
ಫೋಟೋ ವಿವರ: ಶುಶ್ರೂಷಿಕಿಯೊಬ್ಬರು ವೈದ್ಯರಿಗೆ ಸಾಂಕೇತಿಕವಾಗಿ ಲಸಿಕೆ ಹಾಕುವ ವಿಧಾನ ತೋರಿಸಿದರು.