ಚಿತ್ರದುರ್ಗ ನಗರದ ಬಸವೇಶ್ವರ ಆಸ್ಪತ್ರೆಯ ಕೋವಿಡ್ ಪರೀಕ್ಷಾ ಕೇಂದ್ರ ಉದ್ಘಾಟನೆ.

 

ಚಿತ್ರದುರ್ಗ : ಶ್ರೀ ಮುರುಘರಾಜೇಂದ್ರ ಮಠವು ಕೋವಿಡ್-19 ಸಂದರ್ಭದಲ್ಲಿ ನಿರಾಶ್ರಿತರಿಗೆ ಹಲವು ರೀತಿಯ ಜನೋಪಯೋಗಿ ಕಾರ್ಯಗಳನ್ನು ಮಾಡಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಹೇಳಿದರು. ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಸ್ಥಾಪಿಸಲಾಗಿರುವ ಕೋವಿಡ್ ಟೆಸ್ಟ್ ಸೆಂಟರ್‍ನ್ನಾ ಅಂತರ್ಜಾಲದ ಮೂಲಕ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಇತಿಹಾಸ ಮತ್ತು ಸಂಸ್ಕøತಿ ಅತ್ಯಂತ ವೈಭವಪೂರಕವಾದುದು. ಭೌಗೋಳಿಕವಾಗಿ ನೆಲ, ಜಲ, ಹವಾಮಾನ, ಸಂಪತ್ತು ಆದಿಯಾಗಿ ಅದೆಷ್ಟು ಶ್ರೀಮಂತವಾಗಿದೆಯೋ ಅಷ್ಟೇ ಶ್ರೀಮಂತಿಕೆ ಅಧ್ಯಾತ್ಮ, ಧರ್ಮ, ಸಂಸ್ಕಂತಿಗಳಲ್ಲೂ ಇದೆ. ಇಲ್ಲಿನ ಮಠ-ಮಾನ್ಯಗಳು ನಾಡಿನ ಸರ್ವಾಂಗೀಣ ಅಭಿವೃದ್ಧಿಗೆ ಕಾರಣವಾಗಿರುವುದು ಸ್ತುತ್ಯಾರ್ಹ.
ಚಿತ್ರದುರ್ಗ ಇಂದು ಎಲ್ಲರ ಗಮನಸೆಳೆದಿರುವುದು ಪೂಜ್ಯ ಡಾ. ಶಿವಮೂರ್ತಿ ಮುರುಘಾ ಶರಣರ ಸೇವೆಯಿಂದಾಗಿ. ಸಮಾಜದ ಎಲ್ಲ ವರ್ಗದವರನ್ನು ಅದರಲ್ಲಿಯೂ ಶೋಷಿತರ, ದೀನ-ದಲಿತರ ಪಾಲಿಗೆ ನಿಜವಾಗಿಯೂ ಬೆಳಕಾಗಿರುವ ಶ್ರೀಗಳು, ಮಠವನ್ನು ಒಂದು ವರ್ಗದ ಮಠವನ್ನಾಗಿಸದೇ ಸಾಮಾಜಿಕ ಪರಿವರ್ತನೆಯನ್ನು ವೈಚಾರಿಕ ನೆಲೆಗಟ್ಟಿನಲ್ಲಿ ಎಲ್ಲ ವರ್ಗದವರ, ಜಾತ್ಯತೀತ ಮಠವನ್ನಾಗಿ ಪರಿವರ್ತಿಸಿದ ಹಿರಿಮೆ ಶ್ರೀಗಳವರದ್ದಾಗಿದೆ.
ಕೊರೋನಾದಂತಹ ಮಹಾಮಾರಿ ಬಂದು ಹಲವಾರು ತಿಂಗಳು ಕಳೆದು ಹೋಗಿವೆ. ಎಷ್ಟೊಂದು ಸಾವು-ನೋವುಗಳು. ಆರ್ಥಿಕ ಹಿಂಜರಿತ ಉಂಟಾಗಿರುವುದನ್ನು ನೋಡುತ್ತಿದ್ದೇವೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ಮುರುಘಾ ಶರಣರು ಏಪ್ರಿಲ್ ಹಾಗು ಮೇ ತಿಂಗಳಲ್ಲಿ 10ರಿಂದ 12 ಸಾವಿರ ಕೋವಿಡ್ ನಿರಾಶ್ರಿತ ಕುಟುಂಬಗಳಿಗೆ ದವಸ-ಧಾನ್ಯಗಳ ಕಿಟ್‍ಗಳ ವಿತರಿಸುವ ಮೂಲಕ ಹಾಗು ಅನ್ನದಾಸೋಹ ಏರ್ಪಡಿಸುವ ಮೂಲಕ 50ರಿಂದ 60 ಲಕ್ಷ ರೂ.ಗಳನ್ನು ವ್ಯಯಿಸಿ ನೆರವಿಗೆ ಧಾವಿಸಿದ್ದರು.

ಅಂತಹ ಮತ್ತೊಂದು ಹೆಜ್ಜೆಯನ್ನು ಮುರುಘಾ ಶರಣರು ಇರಿಸಿದ್ದು, ಕೊರೋನಾ ಅತಿವೇಗದಲ್ಲಿ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೋವಿಡ್ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಿ ರೋಗಪತ್ತೆ ಕಾರ್ಯ ನಡೆದು ಸೂಕ್ತ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡುತ್ತಿರುವುದು ಶ್ಲಾಘನೀಯವಾದುದು.

ಉತ್ತಮ ವೈದ್ಯಕೀಯ ಸೌಲಭ್ಯ ಹಾಗು 25ಕ್ಕು ಹೆಚ್ಚು ವೆಂಟಿಲೇಟರ್‍ಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಸರ್ಕಾರ ನಿಗದಿಪಡಿಸಿದ ದರದಲ್ಲಿ ದಿನದ 24 ಗಂಟೆಯೂ ಕೋವಿಡ್ ಟೆಸ್ಟ್ ಮಾಡುವ ಕಾರ್ಯ ನಡೆಯಲಿದ್ದು, ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳಬಹುದು. ಈ ಸಂದರ್ಭದಲ್ಲಿ ಅಭಿಮಾನಪೂರ್ವಕವಾಗಿ ಈ ಕೇಂದ್ರವನ್ನು ಉದ್ಘಾಟಿಸುತಿದ್ದೇನೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಕೊರೋನಾ ಪ್ರಪಂಚಕ್ಕೆ ಬಂದು ಅನೇಕ ತಿಂಗಳುಗಳು ಕಳೆದುಹೋಗಿವೆ. ಎಷ್ಟೋ ಜನರು ಸಾವು-ನೋವಿಗೆ ಒಳಗಾಗಿದ್ದಾರೆ. ನಿರಂತರವಾಗಿ ಬರಗಾಲಕ್ಕೆ ತುತ್ತಾಗುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಅನೇಕ ವಿಧವಾದ ಸಮಸ್ಯೆಗಳಿವೆ. ಮುಖ್ಯಮಂತ್ರಿಗಳು ನಮ್ಮೊಟ್ಟಿಗೆ ಮಾತನಾಡಿ ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರಿಗೆ ಎಲ್ಲ ರೀತಿಯ ಸಹಕಾರ ನೀಡಬೇಕೆಂದು ಕೋರಿದ್ದರು. ಅವರ ಸಲಹೆಯಂತೆ ನಾವುಗಳು ಕೋವಿಡ್ ಟೆಸ್ಟ್ ಸೆಂಟರ್‍ನ್ನು ಸ್ಥಾಪಿಸಿದ್ದು, ಅವರಿಂದಲೇ ಲೋಕಾರ್ಪಣೆ ಮಾಡಿಸುತ್ತಿರುವುದು ನಮಗೆ ಸಂತಸ ತಂದಿದೆ. ಇದರ ಸದುಪಯೋಗವನ್ನು ಜನರು ಮಾಡಿಕೊಳ್ಳಬೇಕು ಎಂದರು.
ಶಾಸಕ ಟಿ. ರಘುಮೂರ್ತಿ, ಎಂಎಲ್‍ಸಿ ರಘು ಆಚಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿಸ್ದರು.

Leave a Reply

Your email address will not be published.

Send this to a friend