ಕಾಡುಗೊಲ್ಲ ನಿಗಮ ಮಂಡಳಿ ಬದಲಿಸಿದರೆ ಉಗ್ರವಾದ ಹೋರಾಟ

ಚಿತ್ರದುರ್ಗ : ಸರ್ಕಾರ ಘೋಷಣೆ ಮಾಡಿರುವ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿಗಳಿಗೆ ಗೊಲ್ಲ ಜಾತಿಯನ್ನು ಸೇರ್ಪಡೆ ಮಾಡಬಾರದು ಎಂದು ಕಾಡುಗೊಲ್ಲ ಸಂಘಟನೆಗಳ ಒಕ್ಕೂಟದಿಂದ ಹಿರಿಯೂರು ತಹಶೀಲ್ದಾರ್ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿ, ಶಾಸಕಿ ವಿರುದ್ಧ ಕಾಡುಗೊಲ್ಲ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ಗೊಲ್ಲ/ ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಎಂದು ಬದಲಿಸಲು ಸರ್ಕಾರಕ್ಕೆ ಪತ್ರ ಬರೆದಿರುವ ಶಾಸಕಿ ಕೆ. ಪೂರ್ಣಿಮಾ ವಿರುದ್ಧ ಮಾಜಿ ಜಿಪಂ ಸದಸ್ಯ ಸಿಬಿ. ಪಾಪಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಅಭಿವೃದ್ಧಿ ನಿಗಮ ಬದಲಿಸಿದರೆ ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಂದು ಶಾಸಕಿ ಪೂರ್ಣಿಮಾಗೆ ಅವರು ಎಚ್ಚರಿಕೆ ನೀಡಿದ್ದಾರೆ.

ನಂತರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು “ನಾವು ಯಾರು ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಾಡಿ ಎಂದು ಸರ್ಕಾರವನ್ನು ಕೇಳಿರಲಿಲ್ಲ. ಆದರೆ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲು ಸರ್ಕಾರ ನಿಗಮ ಮಂಡಳಿ ಘೋಷಣೆ ಮಾಡಿದೆ. ಅದಕ್ಕೆ 5 ಕೋಟಿ ರೂಪಾಯಿ ಅನುದಾನ ಕೂಡ ಬಿಡುಗಡೆ ಮಾಡಲಾಯಿತು. ಅಧ್ಯಕ್ಷರ ನೇಮಕ ಮಾಡಿಲ್ಲ ಅಷ್ಟೇ ಈಗ ಶಾಸಕಿ ಅದನ್ನು ತಡೆಯಲು ಹೊರಟಿರುವುದು ಸರಿಯಲ್ಲ ಕಾಡುಗೊಲ್ಲರ ಅಸ್ಮಿತೆ ಉಳಿಸುವುದರ ಜೊತೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಮಾಡಿಕೊಂಡು ಬರುತ್ತಿದ್ದಾರೆ ಅದನ್ನು ತಡೆಯಬಾರದು. ಕಾಡುಗೊಲ್ಲ ಸಮಾಜವನ್ನು ಬದುಕಲು ಬಿಡಿ ಎಂದರು. ಕಾಡುಗೊಲ್ಲರು ಒಂದಾಗಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ, ಮತ ಕೊಟ್ಟವರ ಮೇಲೆ ಯಾಕೆ ನಿಮಗೆ ಇಷ್ಟೋಂದು ಆಕ್ರೋಶ, ಆವೇಶ ಕಾಡುಗೊಲ್ಲರ ಋಣ ತೀರಿಸಿ, ನೀವು ಕಾಡುಗೊಲ್ಲರನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ?. ಎಂದು ಪ್ರಶ್ನೆ ಮಾಡಿದರು.

ಹಿಂದುಳಿದ ಬುಡಕಟ್ಟು ಸಮಾಜದ ಅಸ್ಮಿತೆ ಉಳಿಸಿಕೊಳ್ಳಲು ಹಾಗೂ ಸಮಾಜದ ಅಭಿವೃದ್ಧಿಗೆ ನಮಗೆ ಹೊರಾಟದ ಅವಶ್ಯಕತೆ ಇದೆ. ‌ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರತಿಯೊಂದು ಗೊಲ್ಲರಹಟ್ಟಿಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ಸಂಘಟನೆ ಬಲಗೊಳಿಸಲು ನಮ್ಮ ಹೋರಾಟ ಮುಂದುವರಿಸೋಣ ಎಲ್ಲರು ಜಾಗೃತರಾಗಿ ಎಂದು ಪಾಪಣ್ಣ ಕರೆ ನೀಡಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್ ಮಾತನಾಡಿ ” ನೀವು ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ನಗರದ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ಪರಿವರ್ತನಾ ಯಾತ್ರೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಮಾಜಿ ಸಿಎಂ ಬಿಎಸ್ವೈ ಮುಂದೆ ” ಡಿಟಿ ಶ್ರೀನಿವಾಸ್ ಮಾಡಿದ ಭಾಷಣದಲ್ಲಿ ಯಡಿಯೂರಪ್ಪಾಜೀಯವರೇ ನೀವು ಸಿಎಂ ಆದ್ಮೇಲೆ ” ಕಾಡುಗೊಲ್ಲರ ಅಭಿವೃದ್ಧಿ ನಿಗಮ ಮಾಡಿ, ಅದಕ್ಕೆ ಪ್ರತ್ಯೇಕ 25 ಕೋಟಿ ಅನುದಾನ ಕೊಡಬೇಕು. ಕಾಡುಗೊಲ್ಲ ಎಂದು ಜಾತಿ ಪ್ರಮಾಣ ಪತ್ರ ಕೊಡಬೇಕು ಎಂದು ಯಾಕೆ ಭಾಷಣ ಮಾಡಿದ್ದಿರಿ ?. ಎಂದು ಪ್ರಶ್ನೆ ಹಾಕಿದರು.

ಬಿಜೆಪಿ ಮುಖಂಡ ಬಿಡಿ ಬಸವರಾಜ್ ಮಾತನಾಡಿ ” ದೆಹಲಿಗೆ ನಿಯೋಗ ಕರೆದುಕೊಂಡು ಹೋದಾಗ ನಾನು ಹಿರಿಯೂರಿನಲ್ಲಿ ಗೆದ್ದರೆ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುತ್ತೇನೆಂದು ಪ್ರಮಾಣ ಮಾಡಿದ್ದರು. ಅದನ್ನು ಮರೆತು ಶಾಸಕಿ ವಚನ ಭ್ರಷ್ಟರಾಗಿದ್ದಾರೆ. ಅವರು ನಮಗೆ ಮಾಡುತ್ತಿರುವ ಅನ್ಯಾಯಕ್ಕೆ ಬೇಸತ್ತು ಅವರಿಂದ ದೂರವಾಗಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಾ. ದೊಡ್ಡ ಮಲ್ಲಯ್ಯ, ಕೂನಿಕೆರೆ ರಾಮಣ್ಣ, ಮಾಜಿ ನಗರಸಭೆ ಸದಸ್ಯ ಪ್ರೇಮ್ ಕುಮಾರ್, ಗೋಪಿ ಯಾದವ್, ಕುಣಿಗಲ್ ನಾಗಣ್ಣ, ಶಿವಕುಮಾರ್ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಭು ಯಾದವ್, ಆಲಮರದಹಟ್ಟಿ ರಂಗಯ್ಯ, ತಿಮ್ಮಯ್ಯ, ಮಾಕ್ಲೂರಹಳ್ಳಿ ರಂಗಯ್ಯ, ಮಂಜುನಾಥ್, ರಮೇಶ್, ಪ್ರಕಾಶ್, ರಾಮಚಂದ್ರ, ಕೆ.ಆರ್ ಹಳ್ಳಿ ರವಿ, ಗೋವಿಂದರಾಜು, ರಂಗಪ್ಪ ಯಾದವ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಮನವಿ ಸಲ್ಲಿಸುವಾಗ ವಾಗ್ವಾದ : ಕಾಡುಗೊಲ್ಲ ಅಭಿವೃದ್ಧಿ ನಿಗಮ ಮಂಡಳಿ ಬದಲಿಸಲು ಹೊರಟಿರುವ ಶಾಸಕಿ ಕೆ ಪೂರ್ಣಿಮಾ ವಿರುದ್ಧ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸುವಾಗ ಕಾಡುಗೊಲ್ಲ ಮುಖಂಡರಿಗೂ ಹಾಗೂ ಶಾಸಕಿ ಬೆಂಬಲಿಗರ ನಡುವೆ ಕೆಲಕಾಲ ಮಾತಿನ ಜಟಾಪಟಿ ನಡೆದ ಪ್ರಸಂಗ ನಡೆಯಿತು. ಮನವಿ ಸಲ್ಲಿಸುವ ವಿಷಯ ತಿಳಿದು ಸ್ಥಳಕ್ಕೆ ಬಂದ ಬೆಂಬಲಿಗರಾದ ಕೃಷ್ಣಮೂರ್ತಿ, ಆಲೂರು ತಮ್ಮಣ್ಣ, ಚಿತ್ತಯ್ಯ, ನವೀನ್, ಗೋವಿಂದ ಅವರು ಪೂರ್ಣಿಮಾ ಶ್ರೀನಿವಾಸ್ ಗೆ ಜೈ, ಪೂರ್ಣಿಮಾ ಶ್ರೀನಿವಾಸ್ ಗೆ ಜೈ ಎಂದು ಜೈಕಾರ ಹಾಕಿದರು. ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ನೂಕಾಟ ತಳ್ಳಾಟ ನಡೆಯಿತು. ಪೋಲಿಸರು ಸ್ಥಳದಲ್ಲೇ ಇದ್ದುದರಿಂದ ಎರಡು ಗುಂಪಿನವರನ್ನು ಸಮಾಧಾನಪಡಿಸಿ ಕಳಿಸಿದ ಪ್ರಸಂಗ ನಡೆಯಿತು.

ಈ ಘಟನೆ ಬಗ್ಗೆ ಶಾಸಕರ ಅಭಿಪ್ರಾಯವನ್ನು ತಿಳಿಯಲು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.

Leave a Reply

Your email address will not be published.

Send this to a friend