ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಜನರಿಗೆ ರಾಜ್ಯ ಸರ್ಕಾರ ದೀಪಾವಳಿಗೆ ಬಂಪರ್ ಗಿಫ್ಟ್ ನೀಡಿದೆ. ಚಿತ್ರದುರ್ಗ ಜನತೆಯ ಬಹುದಿನಗಳ ಕನಸು ನನಸಾಗುವಂತೆ ಕಾಣುತ್ತಿದೆ.
ಈ ಹಿಂದೆ ತಡೆ ಹಿಡಿಯಲಾಗಿದ್ದ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಮತ್ತೊಮ್ಮೆ ಒಪ್ಪಿಗೆ ನೀಡಿದ್ದು, ಹಣ ಬಿಡುಗಡೆ ಮಾಡಲು ನಿರ್ಧಾರ ಕೈಗೊಂಡಿದೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಭೇಟಿ ನೀಡಿ, ಉಭಯ ಜಿಲ್ಲೆಯ ಅಭಿವೃದ್ಧಿಗೆ ಹಣಕಾಸು ನೆರವು ಕಲ್ಪಿಸುವಂತೆ ಮನವಿ ಮಾಡಿದರು. ಈ ವೇಳೆ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ 60 ಕೋಟಿ ರೂ. ಅನುದಾನ ಬಿಡುಗಡೆಗೆ ಸೂಚನೆ ನೀಡಲಾಯಿತು.ಇಂದು 60 ಕೋಟಿ ರೂ. ಹಣ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸಚಿವ ಸ್ಥಾನದ ಆಕಾಂಕ್ಷಿ ಪೂರ್ಣಿಮಾ ಶ್ರೀನಿವಾಸ್ ಮಾತನಾಡಿ, ಮಂತ್ರಿ ಆಗಬೇಕು ಎಂದು ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಆದರೆ ಯಾರನ್ನು ಸಚಿವರನ್ನಾಗಿ ಮಾಡಬೇಕು ಅನ್ನೋದನ್ನು ಪಕ್ಷ ನಿರ್ಧರಿಸಲಿದೆ. ಪಕ್ಷ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ನಾನು ಬದ್ಧಳಾಗಿರುತ್ತೇನೆ ಎಂದು ಪರೋಕ್ಷವಾಗಿ ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಎಂದಿದ್ದಾರೆ.