ಚಿತ್ರದುರ್ಗ : ರೈತರ ಹೆಸರಿನಲ್ಲಿ ರಾಜಕೀಯ ಪುಂಡಾಟ ಮಾಡುವುದು ಸರಿಯಲ್ಲ. ದಾಂಧಲೆ ಮಾಡುವುದು ರೈತ ಹಾಗೂ ದೇಶಭಕ್ತ ಮಾಡುವ ಕಾರ್ಯವಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರೈತರ ಹೆಸರಿನಲ್ಲಿ ರಾಷ್ಟ್ರಘಾತಕ ಶಕ್ತಿಗಳು ಕೃತ್ಯ ಎಸಗಿದ್ದಾರೆ. ಕೆಂಪುಕೋಟೆ ಮೇಲೆ ದಾಳಿ ಮಾಡಿದ್ದು, ರಾಷ್ಟ್ರಧ್ವಜ ಕೀಳುವುದು ಸರಿಯಲ್ಲ ಎಂದು ಎಚ್ಚರಿಕೆ ನೀಡಿದರು.
ಕೆಲ ರಾಜಕೀಯ ಪಕ್ಷ ರೈತರ ದಿಕ್ಕು ತಪ್ಪಿಸಿವೆ, ದೆಹಲಿ ದಾಂಧಲೆ ಪ್ರಕರಣದ ಬಗ್ಗೆ ತನಿಖೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳಬೇಕು. ದೇಶದ ರೈತರು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಅಧಿಕಾರ ಇಲ್ಲದಾಗ ಕಾಂಗ್ರೆಸ್ ಪಕ್ಷದಿಂದ ಬೆಂಕಿ ಹಚ್ಚಲಾಗುತ್ತದೆ. ಕಾಂಗ್ರೆಸ್ ಅಧಿಕಾರವಿದ್ದಾಗ ವಿಪಕ್ಷಗಳನ್ನು ಮಣಿಸುವುದು, ಅಧಿಕಾರ ಇಲ್ಲದಾಗ ಅಶಾಂತಿ, ಗಲಭೆ ಸೃಷ್ಠಿಸುವುದು ಕಾಂಗ್ರೆಸ್ ನೀತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಿಎಎ ಜಾರಿ ಸಂದರ್ಭದಲ್ಲೂ ಕಾಂಗ್ರೆಸ್ ನಿಂದ ಗಲಾಟೆಯಾಗಿದೆ. ಪಿಸ್ತೂಲ್ ಹಿಡಿದು ತಿರುಗಿದ್ದರು, ನಿನ್ನೆ ತಲವಾರ್ ಪ್ರದರ್ಶಿಸಿದ್ದಾರೆ. ಕಾಂಗ್ರೆಸ್ ವಿಚಾರ, ಸಿದ್ಧಾಂತ, ದೇಶವನ್ನೂ ಮರೆತಿದೆ. ಕಾಂಗ್ರೆಸ್ ಅಧಿಕಾರಕ್ಕಾಗಿ ಭಯೋತ್ಪಾದಕ ಕೃತ್ಯಕ್ಕೆ ಇಳಿದಿದೆ ಎಂದು ನಳಿನ್ ಕುಮಾರ್ ಕಟೀಲ್ ಕಿಡಿಕಾರಿದರು.
ಮಾಜಿ ಸಿಎಂ ಸಿದ್ಧರಾಮಣ್ಣನಿಗೆ ರೈತಪರ ಮಾತಾಡುವ ನೈತಿಕ ಹಕ್ಕಿಲ್ಲ. ಸಿದ್ದರಾಮಣ್ಣ ಸಿಎಂ ಆಗಿದ್ದಾಗ ರಾಜ್ಯದಲ್ಲಿ 3 ಸಾವಿರ ರೈತರ ಆತ್ಮಹತ್ಯೆಯಾಗಿದೆ. ಸಮಾಜವಾದದ ಹೆಸರಿನಲ್ಲಿ ಮಜಾ ಮಾಡಿದ ಸಿದ್ದರಾಮಯ್ಯ ಎಂದು ಲೇವಡಿ ಮಾಡಿದರು.