ಮಹಿಳಾ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್ ವಿತರಣೆ

ಪೋಷಣ್ ಅಭಿಯಾನ್ ಯೋಜನೆಯಡಿ ಮಹಿಳಾ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‍ಫೋನ್ ವಿತರಣೆ

ಚಿತ್ರದುರ್ಗ : ಚಿತ್ರದುರ್ಗ ಜಿಲ್ಲಾ ಬಾಲಭವನದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪೋಷಣ್ ಅಭಿಯಾನ್ ಯೋಜನೆಯಡಿ ಮಹಿಳಾ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಸೋಮವಾರ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಮಾರ್ಟ್‍ಫೋನ್ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆ ಜನರಿಗೆ ತಲುಪಿಸಲು ಪೋಷಣ್ ಅಭಿಯಾನ ಉತ್ತಮ ಯೋಜನೆಯಾಗಿದ್ದು, ಮಹಿಳಾ ಮೇಲ್ವಿಚಾರಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸ್ಮಾರ್ಟ್‍ಫೋನ್ ಸದ್ಭಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ವಿಶೇಷ ಗಮನ ನೀಡುತ್ತಿವೆ. ಮಕ್ಕಳ ಬೆಳೆವಣಿಗೆಯ ದೃಷ್ಠಿಯಿಂದ ಇಲಾಖೆ ವತಿಯಿಂದ ಸಾಕಷ್ಟು ಬದಲಾವಣೆಗಳನ್ನು ತರಲಾಗುತ್ತಿದೆ ಎಂದರು.
 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಂಗನವಾಡಿ ಕಾರ್ಯನಿರ್ವಹಣೆಗೆ ಡಿಜಿಟಲ್ ರೂಪ ನೀಡುತ್ತಿದ್ದು, ಇದಕ್ಕೆ ಅನುಗುಣವಾಗಿ ಸ್ಮಾರ್ಟ್‍ಫೋನ್ ಬಳಕೆಯ ಕುರಿತು ತರಬೇತಿ ನೀಡುವುದರಿಂದ ಮಾತ್ರ ಇಲಾಖೆಯ ಉದ್ದೇಶ ಸಫಲತೆ ಕಾಣಲಿದೆ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಆರ್.ನರಸಿಂಹರಾಜು ಮಾತನಾಡಿ, ಸ್ಮಾರ್ಟ್‍ಫೋನ್ ಬಳಕೆ ಕುರಿತು ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ನೀಡುವ ಅಗತ್ಯವಿದ್ದು, ಉತ್ತಮವಾಗಿ ತರಬೇತಿಯಿಂದ ಮಾತ್ರ ಯೋಜನೆ ಯಶಸ್ವಿಯಾಗಲಿದೆ ಎಂದರು.
ತಾಲ್ಲೂಕು ಪಂಚಾಯತ್ ಅಧ್ಯಕ್ಷ ಡಿ.ಎಂ.ಲಿಂಗರಾಜು ಮಾತನಾಡಿ, ಸ್ಮಾರ್ಟ್‍ಫೋನ್ ಬಳಕೆಯಿಂದ ಅಂಗನವಾಡಿ ಕಾರ್ಯಕರ್ತೆಯರ ಕೆಲಸದ ಹೊರೆಯನ್ನು ತಪ್ಪಿಸುವುದರ ಜೊತೆಗೆ ಸಮಯವನ್ನು ಉಳಿತಾಯ ಮಾಡುತ್ತದೆ. ಹಾಗಾಗಿ ತಮಗೆ ನೀಡಿರುವ ಸ್ಮಾರ್ಟ್‍ಫೋನ್‍ಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಎಸ್.ರಾಜಾನಾಯ್ಕ್ ಮಾತನಾಡಿ, ಮಕ್ಕಳ ಹಾಜರಾತಿ, ಲಸಿಕೆ, ಆರೋಗ್ಯ ಮಾಹಿತಿ ಸೇರಿದಂತೆ ಇತ್ಯಾದಿ ಸೇವೆಗಳ ಮಾಹಿತಿಯನ್ನು ಸ್ಮಾರ್ಟ್‍ಫೋನ್ ಮೂಲಕ ನಿಖರ ಮಾಹಿತಿ ನೀಡುವ ಜೊತೆಗೆ ಸಮಸ್ಯೆಗಳ ಪರಿಹಾರಕ್ಕೆ ಸಹಕಾರಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತ್ವರಿತಗತಿಯಲ್ಲಿ ಮಾಹಿತಿ ನೀಡುವ ಉದ್ದೇಶದಿಂದ ಸ್ಮಾರ್ಟ್‍ಫೋನ್ ವಿತರಿಸಲಾಗಿದೆ ಎಂದರು.
ಚಿತ್ರದುರ್ಗ ತಾಲ್ಲೂಕಿನ 247 ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ 10 ಮೇಲ್ವಿಚಾರಕಿಯರಿಗೆ ಸ್ಮಾರ್ಟ್‍ಫೋನ್, ಪವರ್ ಬ್ಯಾಂಕ್, ಜಾರ್ಜರ್, ಇಯರ್‍ಫೋನ್, ಮೆಮೊರಿ ಕಾರ್ಡ್ ಹಾಗೂ ಸಿಮ್ ಕಾರ್ಡ್ ವಿತರಿಸಲಾಯಿತು.  
 ಈ ಸಂದರ್ಭದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್.ಸುಧಾ, ನಿರೂಪಣಾಧಿಕಾರಿ ಭಾರತಿ ಬಣಾಕರ್ ಸೇರಿದಂತೆ ಮಹಿಳಾ ಮೇಲ್ವಿಚಾರಕಿಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
 ಫೋಟೋ ವಿವರಣೆ: ಚಿತ್ರದುರ್ಗದ ಜಿಲ್ಲಾ ಬಾಲಭವನದ ಆವರಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪೋಷಣ್ ಅಭಿಯಾನ್ ಯೋಜನೆಯಡಿ ಮಹಿಳಾ ಮೇಲ್ವಿಚಾರಕಿಯರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸ್ಮಾರ್ಟ್‍ಫೋನ್ ವಿತರಿಸಿದರು.

 

Leave a Reply

Your email address will not be published.

Send this to a friend