ಚಿತ್ರದುರ್ಗ : ಒಂದರಿಂದ ಐದನೇ ತರಗತಿಗಳನ್ನು ಆರಂಭ ಮಾಡುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ಇಂದು ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಿಕ್ಷಣ ಸಚಿವರು ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳಿಗೆ ನಲಿಕಲಿ ಮತ್ತು ರೇಡಿಯೋ ಮೂಲಕ ಪಾಠ ಕಲಿಸಲಾಗುತ್ತದೆ ಎಂದರು. ಶಾಲೆಗೆ ಹಾಜರಾತಿ ಕಡ್ಡಾಯವಿಲ್ಲ, ನಾವು ಈ ಸರಿ ಅದನ್ನು ಪರೀಕ್ಷೆಯ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸಚಿವರು ತಿಳಿಸಿದರು.
ದ್ವಿತೀಯ ಪಿಯುಸಿ ಮತ್ತು ಹತ್ತನೇ ತರಗತಿ ಮಕ್ಕಳಿಗೆ ದಿನ ಪೂರ್ತಿ ಶಾಲೆ ನಡೆಸಲು ಅನುಮತಿ ಕೋರಿದ್ದಾರೆ. ಪ್ರಥಮ ಪಿಯುಸಿ, ಎಂಟನೇ ತರಗತಿ ಹಾಗೂ ಒಂಬತ್ತನೆಯ ತರಗತಿಗಳನ್ನು ಆರಂಭಿಸಬೇಕಾಗಿದೆ ಹಾಗಾಗಿ ತಾಂತ್ರಿಕ ಸಲಹಾ ಸಮಿತಿ ಜೊತೆ ಮಾತನಾಡಿ ನಂತರ ತೀರ್ಮಾನಿಸಲಾಗುವುದು ಎಂದರು.
ಶಾಲೆಗೆ ಕಡ್ಡಾಯವಾಗಿ ಬರಬೇಕು ಎನ್ನುವ ಶಾಲೆಗಳ ಬಗ್ಗೆ ಗಮನಕ್ಕೆ ಬರಬೇಕು, ಆಗ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಇನ್ನು ಖಾಸಗಿ ಶಾಲಾ ಶುಲ್ಕ ಪಾವತಿ ಬಗ್ಗೆ ಶಿಕ್ಷಣ ಇಲಾಖೆ ಆಯುಕ್ತರು ಚರ್ಚಿಸಿದ್ದಾರೆ. ಚರ್ಚೆಯ ವರದಿ ನಮಗೆ ಇಂದು ಬಂದಿದೆ. ವರದಿಯನ್ನು ನಾಳೆ ಪರಿಶೀಲಿಸಿ ಪೋಷಕರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿಗೆ ಅನ್ಯಾಯವಾಗದಂತೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದರು.