ಚಿತ್ರದುರ್ಗ : ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳ ಬಳಿ ಧೂಮಪಾನ, ತಂಬಾಕು ಮಾರಾಟ ನಿಷೇಧಿಸಿದ್ದು, ಅಕ್ರಮವಾಗಿ ಯಾರಾದರೂ ಮಾರಾಟ ಮಾಡಿದರೆ ಅಂತಹವರ ವಿರುದ್ದ ಕೇಸು ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂಬುದಾಗಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಲ್ಲೂಕು ಕಚೇರಿಯಲ್ಲಿ ನಡೆದ ತಾಲ್ಲೂಕು ಮಟ್ಟದ ತಂಬಾಕು ನಿಯಂತ್ರಣ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಿ ತಂಬಾಕು ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ ಸಂಪೂರ್ಣವಾಗಿ ಮಾರಾಟವನ್ನು ನಿಯಂತ್ರಿಸಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು. ದಾಳಿ ಸಂದರ್ಭದಲ್ಲಿ ಪೊಲೀಸ್ ಹಾಗೂ ನಗರಸಭೆಯವರು ಕೈಜೋಡಿಸುವಂತೆ ತಿಳಿಸಿದರು.
ಶಾಲಾ-ಕಾಲೇಜುಗಳ ಬಳಿ ನೂರು ಮೀಟರ್ ದೂರದಲ್ಲಿ ತಂಬಾಕು ಮಾರಾಟ ನಿಷೇಧಿಸಿರುವ ಕುರಿತು ಗೋಡೆ ಬರಹವಿರಬೇಕು. ಸಾರ್ವಜನಿಕ ಸ್ಥಳ ಹಾಗೂ ಸರ್ಕಾರಿ ಕಚೇರಿಗಳ ಸಮೀಪ ಧೂಮಪಾನ ಕೂಡ ನಿಷಿದ್ದ ಮಾಡಲಾಗಿದೆ. ಈ ಸಂಬಂಧ ಜನತೆಯಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕಿದೆ. ಎಂಬುದಾಗಿ ಹೇಳಿದರು.
ಈ ಸಮನ್ವಯ ಸಮಿತಿ ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ತುಳಸಿ ರಂಗನಾಥ್, ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ್, ಡಾ.ಗಿರೀಶ್ ಸೇರಿದಂತೆ ವಿವಿಧ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.