ಅಧಿಕಾರಿಗಳ ತಂಡದೊಂದಿಗೆ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ರೋಗಕ್ಕೆ ತುತ್ತಾಗಿರುವ ಈರುಳ್ಳಿ ಬೆಳೆ ಪರಿಶೀಲನೆ.

ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಮಳೆ ಹಾಗೂ ಮೋಡ ಕವಿದ ವಾತಾವರಣದಿಂದಾಗಿ  ಕೊಳೆ ರೋಗಕ್ಕೆ ತುತ್ತಾಗಿ ಹಾಳಾಗಿರುವ ಈರುಳ್ಳಿ ಬೆಳೆಯನ್ನು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹಾಗೂ ಅಧಿಕಾರಿಗಳ ತಂಡದಿಂದ ಪರಿಶೀಲಿಸಿ ಸಮೀಕ್ಷೆ ನಡೆಸಲಾಯಿತು. ಚಿತ್ರದುರ್ಗ ತಾಲ್ಲೂಕಿನ ದಂಡಿನಕುರುಬರಹಟ್ಟಿ, ಕಲ್ಲಹಳ್ಳಿ, ತೋಪುರ ಮಾಳಿಗೆ ಗ್ರಾಮಗಳ ರೈತರ ಹೊಲಗಳಿಗೆ ಶುಕ್ರವಾರ ಭೇಟಿ ನೀಡಿ ಅತಿವೃಷ್ಠಿಯಿಂದ ಹಾನಿಗೀಡಾದ ಈರುಳ್ಳಿ ಬೆಳೆಯನ್ನು ವೀಕ್ಷಿಸಿದರು.
 ನಂತರ ಮಾತನಾಡಿದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ತೋಟಗಾರಿಕೆ ಇಲಾಖೆಯಿಂದ ಕಳೆದ ಒಂದು ವಾರದಿಂದ ನಾಶವಾಗಿರುವ ಈರುಳ್ಳಿ ಬೆಳೆಯನ್ನು ಕುರಿತು ಸಮೀಕ್ಷೆ ಕಾರ್ಯ ನಡೆಯುತ್ತಿದೆ. ಜಿಲ್ಲೆಯಲ್ಲಿ 21 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗಿದ್ದು, ಇದರಲ್ಲಿ 7 ಸಾವಿರ ಹೆಕ್ಟೇರ್ ಸಮೀಕ್ಷಾ ಕಾರ್ಯ ಮಾಡಲಾಗಿದೆ ಎಂದರು.

 ಚಿತ್ರದುರ್ಗ ಜಿಲ್ಲೆಯ ಈರುಳ್ಳಿ ಬೆಳೆ ಉತ್ತಮ ಗುಣಮಟ್ಟದಿಂದ ಕೂಡಿದ್ದು, ರಾಜ್ಯದ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿಗೆ ಉತ್ತಮ ಬೆಲೆ ದೊರೆಯುತ್ತಿತ್ತು. ಜಿಲ್ಲೆಯ ರೈತರು ವಿಶೇಷ ಕಾಳಜಿ ವಹಿಸಿ ಈರುಳ್ಳಿ ಬೆಳೆದಿದ್ದಾರೆ.  ಕಳೆದ ವರ್ಷ ಮುಂಗಾರು ಮಳೆ ಬರಲಿಲ್ಲ. ಹಾಗಾಗಿ ಹಿಂಗಾರಿನಲ್ಲಿ ರೈತರು ಈರುಳ್ಳಿ ಬೆಳೆದರು. ಉತ್ತಮ ಫಸಲು ಬಂದ ಸಂದರ್ಭದಲ್ಲಿ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಮಾರುಕಟ್ಟೆ ಸಿಗದೇ ಬೆಳೆದ ಈರುಳ್ಳಿಯನ್ನು ತಿಪ್ಪೆಗೆ ಸುರಿದರು. ಈ ವರ್ಷದ ಈರುಳ್ಳಿ ಬೆಳೆ ರೋಗಕ್ಕೆ ತುತ್ತಾಗಿ ಹಾನಿಯಾಗಿದೆ. ಇದರಿಂದ ರೈತರು ಆತಂಕಗೊಂಡಿದ್ದಾರೆ. ಈ ಸಂದರ್ಭದಲ್ಲಿ ರೈತರಿಗೆ ಆತ್ಮಸ್ಥೈರ್ಯವನ್ನು ತುಂಬುವುದು ಚುನಾಯಿತ ಪ್ರತಿನಿಧಿಗಳ, ಅಧಿಕಾರಿಗಳ ಹಾಗೂ ಸರ್ಕಾರದ ಕರ್ತವ್ಯವಾಗಿದ್ದು, ರೈತರ ಸಮಸ್ಯೆಗಳನ್ನು ಆಲಿಸಲು ನೇರವಾಗಿ ರೈತರ ಹೊಲಗಳಿಗೆ ಭೇಟಿ ನೀಡಿ ಬೆಳೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಹೇಳಿದರು.

 ಜಿಲ್ಲೆಯ ರೈತರ ಸಮಸ್ಯೆಯನ್ನು ರೈತಪರ ಚಿಂತನೆಯುಳ್ಳ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಕೃಷಿ ಮತ್ತು ತೋಟಗಾರಿಕೆ ಸಚಿವರ ಗಮನಕ್ಕೆ ತಂದು ಸಂಕಷ್ಟದಲ್ಲಿರುವ ಮೆಕ್ಕಜೋಳ ಮತ್ತು ಈರುಳ್ಳಿ ಬೆಳೆದ ಜಿಲ್ಲೆಯ ರೈತರಿಗೆ ಕೇಂದ್ರ ಸರ್ಕಾರದ ಎನ್‍ಡಿಆರ್‍ಎಫ್ ಹಾಗೂ ರಾಜ್ಯಸರ್ಕಾರದ ಎಸ್‍ಡಿಆರ್‍ಎಫ್ ಅಡಿಯಲ್ಲಿ ಪರಿಹಾರ ನೀಡುವುದರ ಮೂಲಕ ಜಿಲ್ಲೆಯ ರೈತರ ಸಮಸ್ಯೆಗಳಿಗೆ ಸ್ಪಂದಿಸಲಿದ್ದಾರೆ ಎಂದು ಶಾಸಕರು ಭರವಸೆ ನೀಡಿದರು.

ಜಿಲ್ಲೆಯಲ್ಲಿ ಈ ವರ್ಷ ವಾಡಿಕೆ ಮಳೆಗಿಂತ ಶೇ 80 ರಷ್ಟು ಮಳೆ ಹೆಚ್ಚಾಗಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದೆ. ಹಾಗಾಗಿ ಚಿತ್ರದುರ್ಗ ತಾಲ್ಲೂಕನ್ನು ಅತಿವೃಷ್ಠಿ ಪಟ್ಟಿಯಲ್ಲಿ ಸೇರ್ಪಡೆ ಮಾಡಬೇಕು. ಮಳೆಯಿಂದಾಗಿ ಕೊಚ್ಚಿ ಹೋಗಿರುವ ಮತ್ತು ಕೊಳೆತು ಹೋಗಿರುವ ಈರುಳ್ಳಿ ಬೆಳೆಗೆ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.

 ಸದನದಲ್ಲಿ ಚರ್ಚೆ ; ಈ ಕುರಿತು ಸೆಪ್ಟೆಂಬರ್ 21ರಿಂದ ರಾಜ್ಯ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದ್ದು, ಜಿಲ್ಲೆಯ ಶಾಸಕರು ಒಗ್ಗಟ್ಟಾಗಿ ಮುಖ್ಯಮಂತ್ರಿಗಳು ಹಾಗೂ ಸಂಬಂಧಪಟ್ಟ ಸಚಿವರ ಜೊತೆ ಚರ್ಚಿಸಿ ಸಂಕಷ್ಟದಲ್ಲಿರುವ ಜಿಲ್ಲೆಯ ಈರುಳ್ಳಿ ಬೆಳೆಗಾರರಿಗೆ ಪರಿಹಾರ ಕೊಡಿಸುವ ಜೊತೆಗೆ ಅವರಿಗೆ ನೆರವಾಗುವ ಕೆಲಸ ಮಾಡಲಾಗುವುದು ಜೊತೆಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

ಉಪವಿಭಾಗಾಧಿಕಾರಿ ಪ್ರಸನ್ನ, ತಹಶೀಲ್ದಾರ್ ವೆಂಕಟೇಶಯ್ಯ, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಸೇರಿದಂತೆ ತೋಟಗಾರಿಕೆ ಮತ್ತು  ಕಂದಾಯ ಇಲಾಖೆ ಅಧಿಕಾರಿಗಳು, ರೈತರು ಉಪಸ್ಥಿತರಿದ್ದರು.

 

Leave a Reply

Your email address will not be published.

Send this to a friend