ಚಿತ್ರದುರ್ಗ : ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಿದ್ದು ರಾತ್ರಿ 8 ಗಂಟೆಯಿಂದ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸಹ ಮಳೆರಾಯ ಅಬ್ಬರಿಸಿದ್ದಾನೆ. ಚಿತ್ರದುರ್ಗದಲ್ಲಿ ರಾತ್ರಿ ಸುರಿದ ಅಕಾಲಿಕ ಮಳೆಗೆ ಕಡ್ಲೆ ಬೇಳೆ ಸಂಪೂರ್ಣ ನಾಶವಾಗಿದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಬಬ್ಬೂರು ಗ್ರಾಮದ ರೈತ ಕಾಂತರಾಜು ಬೆಳೆದ ಹತ್ತು ಎಕರೆಯಲ್ಲಿ 3 ಎಕರೆ ಕಡ್ಲೆ ಬೇಳೆ ಸಂಪೂರ್ಣ ನಾಶವಾಗಿದೆ. ಹೊಲದಲ್ಲಿ ಸಂಪೂರ್ಣವಾಗಿ ನೀರು ನಿಂತು ಬೆಳೆ ನಾಶವಾಗಿ ರೈತರು ಆತಂಕಪಡುವ ಸ್ಥಿತಿ ಎದುರಾಗಿದೆ.
ಇದೇ ಗ್ರಾಮದ ಹಲವಾರು ರೈತರ ಹೊಲದಲ್ಲಿ ನೀರು ನಿಂತಿರುವುದರಿಂದ ಬೆಳೆ ಕೈಸೇರುವುದು ಬಹುತೇಕ ಡೌಟ್ ಆಗಿದೆ. ನಿರಂಜನ್ ಮೂರ್ತಿ ಇವರು 25 ಎಕರೆಯಲ್ಲಿ ಕಡ್ಲೆ ಬೇಳೆ ಬೆಳೆದಿದ್ದು ಸುಮಾರು 5 ಎಕರೆಯ ಹೊಲದಲ್ಲಿ ಸಂಪೂರ್ಣವಾಗಿ ನೀರು ನಿಂತು ಬೆಳೆ ಜಲಾವೃತಗೊಂಡಿದೆ. ಸಾಲ ಸೂಲ ಮಾಡಿ, ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆ ಬೆಳೆದಿರುವ ರೈತರು ಇದೀಗ ಕಂಗಲಾಗಿದ್ದಾರೆ. ಒಂದು ಎಕರೆಯಲ್ಲಿ 7 ಕ್ವಿಂಟಾಲ್ ಕಡ್ಲೆ ಬೆಳೆಯುತ್ತೆವೆ ಎಂದು ರೈತರು ಹೇಳುತ್ತಾರೆ. ಉತ್ತಮ ಫಸಲು ಬಂದಿದ್ದು ಈಗ ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ ಸರ್ಕಾರ ಇದಕ್ಕೆ ಪರಿಹಾರ ಒದಗಿಸಬೇಕು ಎಂದು ರೈತರು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ. ಕೃಷಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.ಜಿಲ್ಲೆಯಲ್ಲಿ ಇನ್ನೇರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ. ಜಿಲ್ಲೆಯಲ್ಲಿ ಮೊಡ ಕವಿದ ವಾತಾವರಣ ಇದ್ದು ಇಂದು ಸಹ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ ಎಂದು ತಿಳಿದು ಬಂದಿದೆ. ರಾತ್ರಿ ಸುರಿದ ಮಳೆಗೆ ಸಣ್ಣದಾಗಿ ರಸ್ತೆಯಲ್ಲಿ ನೀರು ಹರಿದಿದ್ದು, ಅಲ್ಲಲ್ಲಿ ಸಣ್ಣ ಪುಟ್ಟ ಗುಂಡಿಗಳು ತುಂಬಿವೆ ಎನ್ನಲಾಗಿದೆ. ಇದಲ್ಲದೆ ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಒಳನಾಡಿನಲ್ಲಿ ನಾಳೆ ಕೂಡ ಮಳೆಯಾಗುವ ಸಾಧ್ಯತೆ ಇರುವುದರಿಂದ ಜ. 8 ಮತ್ತು 9 ರಂದು ಕೂಡ ಮಳೆಯಾಗುವ ನಿರೀಕ್ಷೆಯಿದೆ. ಉತ್ತರ ಒಳನಾಡಿನಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಅಲ್ಲಲ್ಲಿ ಸಾಧಾರಣೆ ಮಳೆಯಾಗುವ ನಿರೀಕ್ಷೆಯಿದೆ.