ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ತಡರಾತ್ರಿ ವರುಣ ಅಬ್ಬರಿಸಿದ್ದು, ಜಿಲ್ಲೆಯಲ್ಲಿ ಮಳೆಯ ಆರ್ಭಟಕ್ಕೆ ಕೆಲವು ಕಡೆ ಕೆರೆ, ಕಟ್ಟೆಗಳು ತುಂಬಿ ಹರಿಯುತ್ತಿವೆ.
ಇತ್ತ ಬಾರಿ ಮಳೆಗೆ ಚಿತ್ರದುರ್ಗ ಐತಿಹಾಸಿಕ ಚಂದ್ರವಳ್ಳಿ ಕೆರೆ ಕೋಡಿ ಬಿದ್ದಿದೆ. ಚಿತ್ರದುರ್ಗ ತಾಲೂಕಿನ ಮಲ್ಲಾಪುರ ಕೆರೆ ಕೋಡಿ ಬಿದ್ದ ಪರಿಣಾಮವಾಗಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ.ಇತ್ತ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ಗ್ರಾಮದ ಜನರ ಜೀವನ ಅಸ್ತವ್ಯಸ್ತವಾಗಿದೆ. ಮನೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ.
ವರುಣನ ಆರ್ಭಟಕ್ಕೆ ಚಂದ್ರವಳ್ಳಿ ಕೆರೆ ಕೋಡಿ ಬಿದ್ದು ಕಿರು ಜಲಪಾತ ಸೃಷ್ಟಿಯಾಗಿದೆ. ಮತ್ತೊಂದೆಡೆ ರಾತ್ರಿ ಸುರಿದ ಮಳೆಗೆ ಜಿಲ್ಲೆಯ ಹಲವೆಡೆ ಕೃಷಿ ಹೊಂಡಗಳು, ಚೆಕ್ ಡ್ಯಾಂ ಗಳು ಭರ್ತಿಯಾಗಿವೆ. ಇತ್ತ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ, ರೇಣುಕಾಪುರ ಹಳ್ಳಗಳು ಸಹ ಮೈದುಂಬಿ ಹರಿಯುತ್ತಿವೆ.
ಇದಲ್ಲದೆ ಹಿರಿಯೂರು ತಾಲ್ಲೂಕಿನ ಅರಳಿಕೆರೆ ದೊಡ್ಡಹಳ್ಳ ತುಂಬಿ ಹರಿಯುತ್ತಿದೆ, ಕೂಡ್ಲಹಳ್ಳಿ ಚೆಕ್ ಡ್ಯಾಂ. ಹೂವಿನಹೊಳೆ ತೊರೆ ಹರಿಯುತ್ತದೆ. ಐಮಂಗಲ, ಮಸ್ಕಲ್ , ಆರನಕಟ್ಟೆ, ಮತ್ತಿತರ ಕಡೆ ಉತ್ತಮ ಮಳೆಯಾಗಿದೆ. ಹಿರಿಯೂರು ಒಟ್ಟು 58.6 ಎಂ.ಎಂ. ಮೀಟರ್ ಮಳೆಯಾಗಿದೆ. ಹೊಳಲ್ಕೆರೆ ತಾಲ್ಲೂಕಿನಲ್ಲಿ ಸಹ ಮಳೆಯಾಗಿದ್ದು ತಾಲೂಕಿನ ತೇಕಲವಟ್ಟಿ ಗ್ರಾಮದ ಕೆರೆ ಕಟ್ಟೆಗಳು ಭರ್ತಿಯಾಗಿ ಹರಿಯುತ್ತಿವೆ. ಹೊಸದುರ್ಗ ತಾಲ್ಲೂಕಿನಲ್ಲಿ ಸಹ ಹದವಾಗಿ ಮಳೆಯಾಗಿದೆ ಎನ್ನಲಾಗಿದೆ. ಇತ್ತ ಜಿಲ್ಲೆಯಲ್ಲಿ ರೈತರ ಮೊಗದಲ್ಲಿ ಮೇಘರಾಜ ಮಂದಹಾಸ ಮೂಡಿಸಿದೆ. ಜಿಲ್ಲೆಯ ಜನತೆ ಬಿಸಿಲಿಗೆ ಬಸವಳಿದಿದ್ದರು. ಇದೀಗ ಮಳೆರಾಯ ಭೂಮಿಗೆ ತಂಪೆರೆದ ಹಿನ್ನೆಲೆಯಲ್ಲಿ ವಾತಾವರಣ ಕೂಡ ತಂಪಾಗಿದೆ.
ಬಿಸಿಲಿಗೆ ಕಮರಿಹೊಗುತ್ತಿದ್ದ ಬೆಳೆಗಳು ಚಿಗುರಿದ್ದು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಒಟ್ಟಾರೆಯಾಗಿ ಕೋಟೆ ನಾಡು ಚಿತ್ರದುರ್ಗದಲ್ಲಿ ಉತ್ತಮ ಹದವಾದ ಮಳೆಯಾಗಿದೆ ಎನ್ನಬಹುದು.