ನವದೆಹಲಿ: ದೇಶದಾದ್ಯಂತ ಈ ವಾರ ಪ್ರಾರಂಭವಾಗಲಿರುವ ಕೋವಿಡ್-19 ಲಸಿಕೆ ಹಾಕುವ ಕಾರ್ಯಕ್ರಮದ ಸಿದ್ಥತೆ ಪರಿಶೀಲನೆ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ಆರಂಭಿಸಿದ್ದಾರೆ.
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಮತ್ತು ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಮತ್ತು ಸೆರಂ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಗಳನ್ನು ತುರ್ತು ಬಳಕೆಗೆ ಅನುಮತಿಸಲಾಗಿದೆ. ಜನವರಿ 16ರಿಂದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು ಮತ್ತು ಹಿರಿಯರಿಗೆ ಲಸಿಕೆ ನೀಡುವ ನಿರೀಕ್ಷೆ ಇದೆ.
ಆನ್‌ಲೈನ್ ಮೂಲಕ ಸಭೆ ನಡೆಯಲಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಮನ್ವಯವನ್ನು ಪರಿಶೀಲಿಸುವುದು, ಚುಚ್ಚುಮದ್ದಿನ ಸಮರ್ಥ ವಿತರಣೆ ಮತ್ತು ಯೋಜನೆಯ ಸಮರ್ಥ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವುದು ಇದರ ಗುರಿಯಾಗಿದೆ.
ಗೃಹ ಸಚಿವ ಅಮಿತ್ ಶಾ ಅವರೂ ಸಭೆಯಲ್ಲಿ ಭಾಗವಹಿಸುತ್ತಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ರೀತಿಯ ವದಂತಿಗಳು ಮತ್ತು ಲಸಿಕೆ ವಿರೋಧಿ ಪ್ರಚಾರ ನಡೆಯದಂತೆ ನೋಡಿಕೊಳ್ಳುವ ಬಗ್ಗೆಯೂ ಚರ್ಚೆಯಾಗಲಿದೆ.