ಬೆಂಗಳೂರು: 3 ವರ್ಷಗಳ ಹಿಂದೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಪ್ರೀತಿ ಬಲೆಗೆ ಬಿದ್ದ ಯುವಕ-ಯುವತಿ ಇಬ್ಬರೂ ಪಾಲಕರಿಗೆ ತಿಳಿಸಿದೆ ಮದುವೆ ಆಗಿದ್ದರು. ಆದರೀಗ ಯುವತಿ ನೇಣಿಗೆ ಕೊರಳೊಡ್ಡಿ ದುರಂತ ಅಂತ್ಯಕಂಡಿದ್ದಾಳೆ. ಮಗಳ ಸಾವಿಗೆ ನ್ಯಾಯ ಬೇಕೆಂದು ಮೃತಳ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ವೈಟ್ಫೀಲ್ಡ್ ನಿವಾಸಿ ಸುಜಾತಾ ಆತ್ಮಹತ್ಯೆಗೆ ಶರಣಾದವರು. ಬೇಲೂರು ಮೂಲದ ಭದ್ರೇಗೌಡ ನೀಡಿದ ದೂರಿನ ಆಧಾರದ ಮೇರೆಗೆ ವೈಟ್ಫೀಲ್ಡ್ ಠಾಣೆ ಪೊಲೀಸರು ಸುಜಾತ ಪತಿ ಸುಶಾಂತ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. 3 ವರ್ಷಗಳ ಹಿಂದೆ ಸುಜಾತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಆ ವೇಳೆ ಸುಶಾಂತ್ ಈಕೆಯನ್ನು ಪ್ರೀತಿಸುತ್ತಿದ್ದ. ಪಾಲಕರಿಗೆ ಹೇಳದೆ ಇಬ್ಬರೂ ವಿವಾಹವಾಗಿದ್ದರು. ವೈಟ್ಫೀಲ್ಡ್ನಲ್ಲಿ ನೆಲೆಸಿದ್ದ ದಂಪತಿ ಆರಂಭದಲ್ಲಿ ಅನ್ಯೋನ್ಯವಾಗಿದ್ದರು.
ಇತ್ತೀಚೆಗೆ ಪಾಲಕರಿಗೆ ಕರೆ ಮಾಡಿದ್ದ ಸುಜಾತ, “ಪತಿ ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ. ವರದಕ್ಷಿಣೆ ರೂಪದಲ್ಲಿ ತವರು ಮನೆಯಲ್ಲಿರುವ ಆಸ್ತಿಯನ್ನು ತನಗೆ ನೀಡುವಂತೆ ಮಾನಸಿಕ, ದೈಹಿಕ ಹಿಂಸೆ ನೀಡುತ್ತಿದ್ದಾನೆ” ಎಂದಿದ್ದಳು. ಅನುಸರಿಸಿಕೊಂಡು ಹೋಗುವಂತೆ ಪಾಲಕರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದೆ.
ಆ.30ರಂದು ನಾದಿನಿಯ ಮಗಳು ಕರೆ ಮಾಡಿ, ”ಸುಜಾತ ಮನೆಯ ಕಿಟಕಿಯ ಸರಳಿಗೆ ವೇಲ್ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ” ಎಂದಳು. ಈ ಹಿನ್ನೆಲೆಯಲ್ಲಿ ಬೇಲೂರಿನಿಂದ ಬೆಂಗಳೂರಿಗೆ ಬಂದು ನೋಡಿದಾಗ ಮಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ದೂರಿನಲ್ಲಿ ಭದ್ರೇಗೌಡ ಆರೋಪಿಸಿದ್ದಾರೆ.