ಬಳ್ಳಾರಿ : ಬಳ್ಳಾರಿ ಜಿಲ್ಲೆಯ ಹಂಪಿ ಡಿವೈಎಸ್ಪಿ ಕಾಶಿಗೌಡ ಅವರು ಡಿವೈಎಸ್ಪಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅವರು ವ್ಯಕ್ತಿಯೊಬ್ಬರೊಂದಿಗೆ ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಐಜಿಪಿ ನಂಜುಂಡಸ್ವಾಮಿ ಅವರ ಕುರಿತು ಆರೋಪ ಮಾಡಲಾಗಿದೆ. ಐಜಿಪಿ ನಂಜುಂಡಸ್ವಾಮಿ ಪ್ರತಿ ಸ್ಟೇಷನ್ ನಿಂದ ಏಳೂವರೆ ಸಾವಿರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಪಿಎಸ್‌ಐ ಗಳು ನೇರವಾಗಿ ಐಜಿಪಿ ಜೊತೆ ಶಾಮೀಲಾಗಿದ್ದಾರೆ. ಐಜಿ ಕಡೆಯ ಏಜೆಂಟ್ ಗಳೇ ಬಂದು ಪಿಎಸ್‌ಐಗಳ ಬಳಿ ಕಮಿಷನ್ ಕಲೆಕ್ಟ್ ಮಾಡಿಕೊಂಡು ಹೋಗ್ತಾರೆ.
ಐಜಿ, ನೀವು ಅಕ್ರಮಗಳನ್ನು ತಡೆದಿಲ್ಲ ಎಂದರು. ಆಗ ನಾನು ಅಕ್ರಮಗಳ ಮೂಲ ಆಧಾರವೇ ನಿಮ್ಮ ಆಫೀಸ್ ಎಂದೆ. ನಂತರ ರಾಜೀನಾಮೆ ನೀಡುವಂತೆ ಹೇಳಿದರು ಎಂದು ಆಡಿಯೋದಲ್ಲಿ ದೂರಿದ್ದಾರೆ. ಜೊತೆಗೆ ನನ್ನ ಸ್ಟೇಷನ್ ಗೆ ಪ್ರತೀ ತಿಂಗಳು 7500 ಫಿಕ್ಸ್ ಮಾಡಿದ್ದಾರೆ. ನೇರವಾಗಿ ಅಕ್ರಮದಲ್ಲಿ ಅವರೇ ಭಾಗಿಯಾದಾಗ ಅಕ್ರಮ ನನಗೆ ಅಕ್ರಮ ತಡೆಯೊಕೆ ಆಗಲ್ಲ ಎಂದಿದ್ದಾರೆ.
ಈ ನಡುವೆ ಡಿವೈಎಸ್ ಪಿ ಕಾಶಿಗೌಡ ರಾಜೀನಾಮೆ ನೀಡಿದ್ದು, ಸಭೆಯೊಂದರಲ್ಲಿ ಐಜಿಪಿ ನಂಜುಂಡಸ್ವಾಮಿ ಮತ್ತು ಡಿವೈಎಸ್ಪಿ ನಡುವೆ ಮಾತಿನ ಚಕಮಕಿ ನಡೆದು ಈ ಸಂಬಂಧ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾ ಎಸ್ ಪಿ ಸೈದುಲ್ಲಾ ಅಡಾವತ್, “ನನಗೆ ಅವರು ನೀಡಿದ ರಾಜೀನಾಮೆ ಪತ್ರ ತಲುಪಿಲ್ಲ. ಅವರು ಶಿಷ್ಟಾಚಾರ ಅನುಸರಿಸಿ ರಾಜೀನಾಮೆ ನೀಡಿದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.
ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್ ಅವರಿಗೆ ಪತ್ರದ ಮುಖೇನ ರಾಜೀನಾಮೆ ಸಲ್ಲಿಸಲಾಗಿದೆ. ಈಗ ಮತ್ತೊಮ್ಮೆ ರಾಜೀನಾಮೆ ಸಲ್ಲಿಸಲಾಗುವುದು ಎಂದು ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿ ಹೇಳಿದ್ದಾರೆ. ನಮ್ಮ ಕೆಳಗಿನವರು ನೇರವಾಗಿ ಮೇಲಾಧಿಕಾರಿಯೊಂದಿಗೆ ಸಂಪರ್ಕ ಹೊಂದಿರುತ್ತಾರೆ. ಆದರೆ ಅಕ್ರಮ ತಡೆಯಲು ಒತ್ತಡ ಹೇರುತ್ತಾರೆ. ಕೆಳಗಿನವರು ಹಾಗೂ ಮೇಲಾಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿ ನಮ್ಮನ್ನು ಹಿಂಸಿಸುತ್ತಾರೆ. ಹೀಗಾಗೇ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.