ಎಸ್ಸಿ, ಎಸ್ಟಿಗೆ ಮೀಸಲಾತಿ ಹೆಚ್ಚಿಸಿರುವುದು ಸ್ವಾಗತಾರ್ಹ, ಕಾಡುಗೊಲ್ಲರಿಗೂ ಎಸ್ಟಿ ನೀಡಿ ನಟ ಚೇತನ್ ಆಗ್ರಹ

ಹಿರಿಯೂರು (ಅ.೩೦) : ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಹೆಚ್ಚಳ ಮಾಡಿರುವುದು ಸ್ವಾಗತಾರ್ಹ, ಮಧ್ಯ ಕರ್ನಾಟಕದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಬುಡಕಟ್ಟು ಕಾಡುಗೊಲ್ಲ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಸರ್ಕಾರಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಆಗ್ರಹಿಸಿದ್ದಾರೆ.

ನಗರದಲ್ಲಿ ಕಾಡುಗೊಲ್ಲ ಸಮುದಾಯದ ಯುವಕರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಮೀಸಲಾತಿ ಎಂಬುದು ಸಾಮಾಜಿಕ ನ್ಯಾಯ. ಮೈಸೂರು ಜಯಚಾಮರಾಜೇಂದ್ರ ಒಡೆಯರ್, ಅಂಬೇಡ್ಕರ್, ಪೆರಿಯರ್ ಸೇರಿದಂತೆ ಮತ್ತಿತರರು ಮೀಸಲಾತಿ ತಿದ್ದುಪಡಿ ತರಲು ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಉಳಿಸುವುದು ಬಹಳ ಮುಖ್ಯ ಎಂದು ಹೇಳಿದರು.

ಚಿತ್ರದುರ್ಗ ಭಾಗದಲ್ಲಿ ಮೀಸಲಾತಿ ಹೋರಾಟ ಮುಂದುವರಿದಿದ್ದು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಮೀಸಲಾತಿ ಹೆಚ್ಚಳ ಮಾಡುವಂತೆ ಹೋರಾಟ ನಡೆಸಿದ್ದಾರೆ. ನಾಗ ಮೋಹನ್ ದಾಸ್ ವರದಿಯಿಂದ ಎಸ್ಟಿ ಜನಾಂಗಕ್ಕೆ 3% ಇರುವ ಮೀಸಲಾತಿ 7% ಹೆಚ್ಚಳ ಮಾಡಿರುವುದು ಒಳ್ಳೆಯ ಬೆಳವಣಿಗೆ ಹಾಗೂ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿಯ ಜೊತೆಗೆ ಒಳಮೀಸಲಾತಿ ಸಿಗಬೇಕು ಎಂದು ತಿಳಿಸಿದರು.

ಕಾಡುಗೊಲ್ಲ ಬುಡಕಟ್ಟು ಜನಾಂಗ ತನ್ನದೆ ಆದ ವಿಶೇಷ ಮತ್ತು ವಿಶಿಷ್ಟ ಸಾಂಸ್ಕೃತಿಕತೆಯನ್ನು ಹೊಂದಿದೆ. ಈ ಸಮುದಾಯದಲ್ಲಿ ಜುಂಜಪ್ಪ, ಯತ್ತಪ್ಪ, ಜಂಪಣ್ಣ, ಕಾಟಪ್ಪ, ಕರಡಿಬುಳ್ಳಪ್ಪ ಇಂತಹ ಮಹಾನ್ ಪುರುಷರ ಪರಂಪರೆಯನ್ನು ಹೊಂದಿದೆ.
ಬುಡಕಟ್ಟು ಲಕ್ಷಣಗಳನ್ನು ಹೊಂದಿರುವ ಸಮಾಜಕ್ಕೆ 2018ರಲ್ಲಿ ಜಾತಿ ಪಟ್ಟಿ ನೀಡುವಂತೆ ಸಮುದಾಯದ ಹೋರಾಟಗಾರರು, ಸ್ನೇಹಿತರು ಮತ್ತು ಮುಖಂಡರೊಂದಿಗೆ ಹೋರಾಟ ಮಾಡಿ ಕಾಡುಗೊಲ್ಲರನ್ನು ಜಾತಿ ಪಟ್ಟಿಗೆ ಸೇರಿಸಲಾಯಿತು.

ಬುಡಕಟ್ಟು ಸಂಪ್ರದಾಯ ಹೊಂದಿರುವ ಇವರಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ನನ್ನ ಬೇಡಿಕೆ ಇದೆ. ನಾನು ಸಹ ಈ ಬೇಡಿಕೆಯನ್ನು ಮುಂದುವರಿಸುತ್ತೇನೆ ಎಂದರು.ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಹಾಗೂ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಅವರಿಗೆ ಒತ್ತಡ ಹಾಕಲಾಗಿದೆ. ಅದಷ್ಟು ಬೇಗ ಮೀಸಲಾತಿ ನೀಡುವಂತೆ ಮತ್ತೆ ಒತ್ತಡ ತರಲಾಗುವುದು. ಕಾಡುಗೊಲ್ಲರ ಎಸ್ಟಿ ಬೇಡಿಕೆ ಬಹಳ ನ್ಯಾಯಯುತವಾಗಿದೆ ಎಂದರು. ಕಾಡುಗೊಲ್ಲ ಸಮುದಾಯ, ಆದಿವಾಸಿ ಸಮಾಜ, ಮೂಲನಿವಾಸಿಗಳು ಹಾಗೂ ಬಹು ಸಂಸ್ಕೃತಿ ಜೊತೆ ಸದಾ ಜೊತೆಗಿರುತ್ತೇನೆ. ಬಹುಜನರ ಎಸ್ಸಿ ಎಸ್ಟಿ ಹಿಂದುಳಿದ ವರ್ಗಗಳ ಎಲ್ಲಾ ಜಾತಿ ಜನಾಂಗದ ಮಹಿಳೆಯರಿಗೊಸ್ಕರ ನ್ಯಾಯ ಒದಗಿಸಬೇಕು. ನಮಗೆ ಅಸಮಾನತೆ ಮಾಡಿರುವ ಬ್ರಾಹ್ಮಣ್ಯ ಮತ್ತು ವೈಧಿಕತೆಯನ್ನು ಎಲ್ಲರೂ ಸೇರಿ ವಿರೋಧಿಸೋಣ ಎಂದು ಹೇಳಿದರು.

ಈ‌ ಸಂದರ್ಭದಲ್ಲಿ ಕರವೇ ಕೃಷ್ಣ ಪೂಜಾರ್, ಸಮಾಜ ಸೇವಕ ಪಾರ್ಥ ಮೀಸೆ, ಬಸವರಾಜ್, ಸತೀಶ್, ಜಬೀ, ಪೈರಾಜ್, ಭಾಷಾ, ಅಫ್ಜಲ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend