ಹಿರಿಯೂರು : ಭೀಮಯ್ಯ ಮೇಷ್ಟ್ರೇ ಎಂದೇ ಪ್ರಸಿದ್ಧಿ ಪಡೆದಿದ್ದ ಹಿರಿಯ ಸಾಹಿತಿ ಭೀಮಯ್ಯ (96) ನಿಧನರಾಗಿದ್ದಾರೆ.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ವಾಗಿದ್ದು, ಸಾಹಿತ್ಯ ಕ್ಷೇತ್ರದ ಹಿರಿಯ ಕೊಂಡಿಯೊಂದು ಕಳಚಿದೆ. ತಾಲ್ಲೂಕಿನ ಮಾರೇನಹಳ್ಳಿ ಗ್ರಾಮದ ಕೃಷಿ ಕುಟುಂಬದಲ್ಲಿ 1925 ರಲ್ಲಿ ಜನಿಸಿದ್ದರು. ಇವರ ತಾತ ಸಣ್ಣಲಿಂಗೇಗೌಡ ಅವರ ಪ್ರಭಾವಕ್ಕೆ ಒಳಗಾಗಿ ಅಧ್ಯಾತ್ಮ ಮತ್ತು ತತ್ವ ಸಾಧನೆಯನ್ನೇ ಧ್ಯಾನಿಸಿ ಸಾಧಕರಾದರು. ರಾಮಾಯಣ, ಗದುಗಿನ ಭಾರತ, ದೇವಿ ಮಹಾತ್ಮೆ ಇವರ ಪಾಲಿಗೆ ಆಧ್ಯಾತ್ಮ ಪಠ್ಯಗಳಾಗಿದ್ದವು. ಶ್ರೀಯುತರು 1950 ರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದರು, ಸರ್ಕಾರಿ ಕೆಲಸಕ್ಕೆ ಸೇರದೆ ಹಳ್ಳಿಗೆ ಬಂದು ನೆಲೆಸಿದ್ದರು. ನೈತಿಕ ಮೌಲ್ಯಗಳ ಬಗ್ಗೆ ಮಾರ್ಗದರ್ಶಕ “ಮೇಷ್ಟ್ರು” ಆಗಿದ್ದರಿಂದ ಎಲ್ಲರ ಬಾಯಲ್ಲೂ “ಭೀಮಯ್ಯ ಮೇಷ್ಟ್ರು” ಎಂದು ಪ್ರಸಿದ್ಧಿಯಾದರು. ಅಂದು ಇವರು “ಆನಂದ ಮಠ” ಎಂಬ ಸಂಘವನ್ನು ಸ್ಥಾಪಿಸಿದ್ದರು. ನಾಟಕ, ಕಾವ್ಯ, ವಚನಗಳಲ್ಲಿ ನೆಮ್ಮದಿ ಕಂಡುಕೊಂಡರು.
ಶ್ರೀಯುತರು “ಸತ್ವ ಪರೀಕ್ಷೆ” (ನಾಟಕ), ಜೀವನಾಮೃತ (ನಾಟಕ), ದೇವಿ ಮಹಾತ್ಮೆ ಕಥೆಯನ್ನು ಆಧರಿಸಿದ “ಚಿದಾನಂದ ಲೀಲೆ” (ನಾಟಕ), ಹಾಗೂ ರಾಮಾಯಣ ದರ್ಶನಂ ಮಹಾಕಾವ್ಯದ ಸರಳ ಗದ್ಯಾನುವಾದ “ರಾಮಾಯಣ ಸಂದರ್ಶನ”, “ಮಂಕು ಭೀಮನ ಬೊಗಳೆ” ಎಂಬ ಕೃತಿಗಳನ್ನು ರಚಿಸಿದ್ದಾರೆ.
ಹಿರಿಯೂರಿನಲ್ಲಿ ನಡೆದಿದ್ದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಪಟ್ಟನಾಯಕನಹಳ್ಳಿ ಮಠದ “ಸ್ಪಟಿಕಶ್ರೀ ” ಪ್ರಶಸ್ತಿ (2010), ತತ್ವಜ್ಞಾನಿ ಪಟೇಲ್ ಬೊಮ್ಮೆಗೌಡ ಸ್ಮಾರಕದ ತತ್ವಶ್ರೀ ಪ್ರಶಸ್ತಿ (2016) ಲಭಿಸಿದೆ. ಈಗಿನ ಯುವಕರು ಪ್ರೀತಿಯಿಂದ “ತಾತ” ಎಂಬ ಬಿರುದು ನೀಡಿದ್ದರು. ಮೃತರು ಇಬ್ಬರು ಪುತ್ರಿಯರು, ಮೂವರು ಪುತ್ರರು ಸೇರಿದಂತೆ ಅನೇಕ ಬಂದು ಬಳಗವನ್ನು ಅಗಲಿದ್ದಾರೆ. ಮಾರೇನಹಳ್ಳಿ ಗ್ರಾಮ ಸೇರಿದಂತೆ ಜಿಲ್ಲೆಯ ಅನೇಕರು ಮೃತರ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.