ಹಿರಿಯೂರು : ಕಾಡುಗೊಲ್ಲರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸಿ ಎಂದು ಹೇಳಿಕೆ ನೀಡಿದ್ದ ಚಿತ್ರದುರ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ. ಮುರುಳಿ, ಸಿದ್ದೇಶ್ ಯಾದವ್, ಮೀಸೆ ಮಹಾಲಿಂಗಪ್ಪ ವಿರುದ್ಧ ಇದೀಗ ಅವರದೇ ಸಮುದಾಯದ ಹಿರಿಯೂರಿನ ಮುಖಂಡರು ತಿರುಗಿಬಿದ್ದಿದ್ದಾರೆ.
ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಚಿದಾನಂದ ಗೌಡ ಅವರನ್ನು ಕಾಡುಗೊಲ್ಲರು ಬೆಂಬಲಿಸಿ ಎಂದು ಈ ಬಿಜೆಪಿ ಮುಖಂಡರು ಪತ್ರಿಕಾ ಗೋಷ್ಠಿ ನಡೆಸಿದ್ದರು. ಬಂಡಾಯ ಅಭ್ಯರ್ಥಿಯಾಗಿ ಡಿ.ಟಿ. ಶ್ರೀನಿವಾಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ಹಾಗಾಗಿ ಕಾಡುಗೊಲ್ಲ ಸಮಾಜದ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ಬಿಜೆಪಿ ಕಾಡುಗೊಲ್ಲ ಸಮುದಾಯದ ಮುಖಂಡರು ನಿನ್ನೆ ಪತ್ರಿಕಾ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಇಂದು ಶ್ರೀಕೃಷ್ಣ ದೇವಸ್ಥಾನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಹಿರಿಯೂರು ಗೊಲ್ಲ ಸಮಾಜದ ಮುಖಂಡರು ಕಾಡುಗೊಲ್ಲ ಇಲ್ಲ, ಊರುಗೊಲ್ಲ ಇಲ್ಲ, ನಾವೆಲ್ಲರೂ ಗೊಲ್ಲ ಸಮುದಾಯ ಒಂದೇ ಎಂದರು.
ಅವರವರ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಸಮಾಜ ಒಡೆಯುವ ಕೆಲಸ ಮಾಡಬಾರದು. ಕಾಡುಗೊಲ್ಲ ಎನ್ನುವುದು ಎಲ್ಲಿಯೂ ಇಲ್ಲ. ದ್ವಂದ್ವ ಹೇಳಿಕೆ ನೀಡುವುದನ್ನು ಬಿಡಬೇಕು. ಸಮುದಾಯದ ಅಭಿವೃದ್ಧಿಗೆ ಶಾಸಕಿ ಕೆ. ಪೂರ್ಣಿಮಾ ಶ್ರಮಿಸುತ್ತಿದ್ದಾರೆ ಅವರಿಗೆ ಸಹಕಾರ ನೀಡೋಣ ಎಂದರು. ಅವರ ಪತಿ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಆಗಿದ್ದರು. ಟಿಕೆಟ್ ದೊರೆಯದ ಕಾರಣ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಡಿ.ಟಿ. ಶ್ರೀನಿವಾಸ್ ನವರಿಗೆ ಬೆಂಬಲಿಸಿ ಗೆಲ್ಲಿಸೋಣ, ನಮ್ಮ ಬೆಂಬಲ ಶ್ರೀನಿವಾಸ್ ಗೆ ಎಂದು ಮುಖಂಡರು ಪತ್ರಿಕಾ ಗೋಷ್ಠಿಯಲ್ಲಿ ಕರೆ ನೀಡಿದರು.
ಸಮಾಜಕ್ಕೆ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಮೀಸೆ ಮಹಾಲಿಂಗಪ್ಪ, ಸಿದ್ದೇಶ್ ಯಾದವ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಎ. ಮುರುಳಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ನಗರಸಭಾ ಸದಸ್ಯ ಬಿ.ಕೆ. ಕರಿಯಪ್ಪ, ಉಗ್ರಮೂರ್ತಿ, ದಾಸಪ್ಪ, ಕಲಾವತಿ ವಕೀಲರು, ಎಜಿ. ತಿಮ್ಮಯ್ಯ, ಡಾಬಾ ಚಿಕ್ಕಣ್ಣ, ಕರಿಯಣ್ಣ, ಮಹಾಂತೇಶ, ಚಂದ್ರಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.