ಚಿತ್ರದುರ್ಗ: ಬಸ್, ಕಾರು ಹಾಗು ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಪಟ್ರೇಹಳ್ಳಿ ಸಮೀಪ ಗ್ರೀನ್ ಲ್ಯಾಂಡ್ ಹೋಟೆಲ್ ಸಮೀಪದ ರಾಷ್ಟ್ರೀಯ ಹೆದ್ದಾರಿ 04 ರಲ್ಲಿ ಈ ಅಪಘಾತ ನಡೆದಿದೆ. ಖಾಸಗಿ ಬಸ್, ಇಂಡಿಕಾ ಕಾರು, ಮಾರುತಿ ಓಮ್ನಿ, ಕ್ಯಾಂಟರ್ ವಾಹನ ಹಾಗು ಟಾಟಾ ಏಸ್ ನಡುವೆ ಅಪಘಾತ ಸಂಭವಿಸಿದ್ದು ಓಮಿನಿ ಕಾರಿನಲ್ಲಿದ್ದ ಹಾವೇರಿ ಮೂಲದ ಲತಾ(28) ಮತ್ತು ಬೆಂಗಳೂರಿನ ಅತ್ತಿಬೆಲೆ ನಿವಾಸಿ ಟಾಟಾ ಏಸ್ ಚಾಲಕ ಶಶಿಕುಮಾರ್(26) ಇಬ್ಬರು ಸಾವನ್ನಪ್ಪಿದ್ದಾರೆ. ಶೃತಿ (03), ಜ್ಯೋತಿ (25), ಜಾಗೃತಿ (04), ದ್ಯಾಮಣ್ಣ (24) ವರ್ಷ, ಇವರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಖಾಸಗಿ ಬಸ್ ಚಾಲಕನ ಅಜಾಗರೂಕತೆಯೇ ಸರಣಿ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದ್ದು, ವಿಷಯ ತಿಳಿದ ತಕ್ಷಣ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ.