ಚಿತ್ರದುರ್ಗ : ಜಿಲ್ಲೆಯ ಹಿರಿಯೂರು ನಗರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ 08 ನೇ ವಾರ್ಡ್ ಸದಸ್ಯೆ ಶಂಶುನ್ಸಿಸಾ ಹಾಗೂ ಉಪಾಧ್ಯಕ್ಷರಾಗಿ 18 ನೇ ವಾರ್ಡ್ ಸದಸ್ಯ ಬಿ.ಎನ್. ಪ್ರಕಾಶ್ ಅವಿರೋಧವಾಗಿ ಆಯ್ಕೆಯಾಗಿದ್ದು ನಗರಸಭೆಯಲ್ಲಿ ಕಾಂಗ್ರೆಸ್ ನ ಮಾಜಿ ಸಚಿವ ಡಿ. ಸುಧಾಕರ್ ಬೆಂಬಲಿಗರು ಅಧಿಕಾರ ಹಿಡಿದಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಶಾಸಕರಿದ್ದು, ಬಿಜೆಪಿಗೆ ಸ್ಪರ್ಧಿಸಲು ಅಭ್ಯರ್ಥೀಯೇ ಇಲ್ಲದಂತಾಗಿದ್ದು, ತೀವ್ರ ಮುಖಭಂಗವಾಗಿದೆ.
ನಗರಸಭೆಯಲ್ಲಿ ಒಟ್ಟು 31 ವಾರ್ಡ್ ಗಳಿದ್ದು 13 ರಲ್ಲಿ ಕಾಂಗ್ರೆಸ್,09 ರಲ್ಲಿ ಪಕ್ಷೇತರ, 06 ರಲ್ಲಿ ಬಿಜೆಪಿ ಹಾಗೂ 03 ರಲ್ಲಿ ಜೆಡಿಎಸ್ ಅಭ್ಯರ್ಥಿಗಳು ಜಯ ಗಳಿಸಿದ್ದರು. 31 ಸದಸ್ಯರಲ್ಲಿ ಓರ್ವ ಜೆಡಿಎಸ್ ಹಾಗೂ ಓರ್ವ ಕಾಂಗ್ರೆಸ್ ಸದಸ್ಯ ಮೃತಪಟ್ಟಿದ್ದಾರೆ. ಅಧ್ಯಕ್ಷ ಸ್ಥಾನ ಬಿಸಿಎ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಜಿ ಪುರುಷರಿಗೆ ಮೀಸಲಾಗಿತ್ತು.
ಬುಧವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ 08 ನೇ ವಾರ್ಡ್ ನ ಗೆದ್ದಿರುವ ಕಾಂಗ್ರೆಸ್ ಬೆಂಬಲಿತ ಶಂಶುನ್ನಿಸಾ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 18 ನೇ ವಾರ್ಡ್ ನ ಬಿ.ಎನ್. ಪ್ರಕಾಶ್ ನಾಮಪತ್ರ ಸಲ್ಲಿಸಿದ್ದರು. ಬೇರೆ ಯಾವುದೇ ನಾಮಪತ್ರಗಳು ಸಲ್ಲಿಕೆ ಆಗಿದ್ದರಿಂದ ಅಂತಿಮವಾಗಿ ಚಿತ್ರದುರ್ಗ ಉಪವಿಭಾಗಾಧಿಕಾರಿ ಪ್ರಸನ್ನ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಸಭೆಯಲ್ಲಿ ಕಾಂಗ್ರೆಸ್ ಪಕ್ಷದ 13 ಸದಸ್ಯರು, ಜೆಡಿಎಸ್ ನಿಂದ ಗೆದ್ದು ಕಾಂಗ್ರೆಸ್ ಸೇರ್ಪಡೆ ಆದ ಇಬ್ಬರು ಸದಸ್ಯರು, ಬಿಜೆಪಿ ಬೆಂಬಲಿತ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಸೇರ್ಪಡೆ ಆದ ಓರ್ವ ಸದಸ್ಯೆ ಹಾಗೂ ಪಕ್ಷೇತರ 08 ಸದಸ್ಯರು ಸೇರಿ 23 ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಗೆಲುವು ಸಾಧಿಸುತಿದ್ದಂತೆ ಪಕ್ಷದ ನಾಯಕರು ಹಾಗೂ ಮುಖಂಡರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.