ಚಿತ್ರದುರ್ಗ : ಅಡುಗೆ ಸಿಲಿಂಡರ್ ಗಳನ್ನು ಗ್ರಾಹಕರಿಗೆ ತಲುಪಿಸುವ ತುಂಬಿದ ಸಿಲಿಂಡರ್ ನಿಂದ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಗಳು ಕೈ ಜೋಡಿಸಿ ಅನಧಿಕೃತವಾಗಿ ಆಟೋ ಸಿಲಿಂಡರ್ ಗೆ ಕಳ್ಳ ದಂಧೆಯಲ್ಲಿ ಗ್ಯಾಸ್ ಫಿಲ್ಲಿಂಗ್ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಘಟನೆ
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ವೆಂಕಟಾದ್ರಿ ಭಾರತ್ ಗ್ಯಾಸ್ ಏಜೆನ್ಸಿ ಅವರ ಶಿಕ್ಷಕರ ಬಡವಾಣೆಯ ಭಾರತ್ ಗ್ಯಾಸ್ ಏಜೆನ್ಸಿಯ ಜಾಗದಲ್ಲಿ ಎರಡು ಲಾರಿಗಳ ಮಧ್ಯೆ ತುಂಬಿದ ಸಿಲಿಂಡರ್ ನಲ್ಲಿರುವ ಗ್ಯಾಸ್ ನ್ನು ಆಟೋ ಗ್ಯಾಸ್ ಗೆ ಅನಧಿಕೃತವಾಗಿ ಫಿಲ್ಲಿಂಗ್ ಮಾಡುವ ವೀಡಿಯೋ ಹರಿದಾಡುತ್ತಿದ್ದು ವೀಡಿಯೋದ ಕೊನೆಯಲ್ಲಿ “ಅಣ್ಣೋ ಸಾಕು ಬಿಡಣ್ಣೋ, ಅಣ್ಣೋ” ಎನ್ನುವ ಮಾತು ಕೂಡ ಕೇಳಿಬಂದಿದೆ.
ಇದರಿಂದ ಗ್ರಾಹಕರು ಕೊಳ್ಳುವ ಸಿಲಿಂಡರ್ ನಲ್ಲಿ 1 ರಿಂದ 2 ಕೆಜಿ ಕಡಿಮೆ ಸಿಲಿಂಡರ್ ಕಡಿಮೆ ಇರುತ್ತದೆ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.
ನಗರದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳು, ಮನೆಗಳು ಇರುವುದರಿಂದ ಅನಧಿಕೃತವಾಗಿ ಅಥವಾ ಅವೈಜ್ಞಾನಿಕವಾಗಿ ಫಿಲ್ಲಿಂಗ್ ಮಾಡುವ ಸಂದರ್ಭದಲ್ಲಿ ಒಂದು ವೇಳೆ ಅನಾಹುತ ಸಂಭವಿಸಿದರೆ ಇದು ಕಲ್ಲುಕ್ವಾರಿ ಸ್ಟೋಟಕ್ಕಿಂತ ಅಪಾಯಕಾರಿ ಎನ್ನಲಾಗಿದೆ. ಯಾಕೆಂದರೆ ಪಕ್ಕದಲ್ಲಿ ಸಾವಿರಾರು ಸಿಲಿಂಡರ್ ಗಳಿದ್ದು, ಸಿಲಿಂಡರ್ ಸ್ಪೋಟಗೊಂಡರೆ ಯಾವ ಅಗ್ನಿಶಾಮಕ ದಳದವರು ಬಂದರು ಘಟನೆ ತಪ್ಪಿಸಲು ಸಾಧ್ಯವಿಲ್ಲ ಎನ್ನಬಹುದು. ಇಂತಹ ಬಹುದೊಡ್ಡ ದುರಂತ ಸಂಭವಿಸಿದರೆ ಇದಕ್ಕೆ ಕಾರಣ ಯಾರು ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಗ್ಯಾಸ್ ಏಜೆನ್ಸಿಯ ಸಿಬ್ಬಂದಿಯೊಬ್ಬರನ್ನು ಒನ್ ಇಂಡಿಯಾ ಸಂಪರ್ಕಿಸಿದಾಗ ಸರ್ ಇದು ಹಳೆ ವೀಡಿಯೋ, ಇದು ಫೆಕ್ ವೀಡಿಯೋ ಆಗಿದೆ. ಕಳೆದ ಏಳೆಂಟು ತಿಂಗಳ ಹಿಂದೆ ಮಾಡಿರುವ ವೀಡಿಯೋ, ಈಗಾಗಲೇ ಅದರಲ್ಲಿ ಭಾಗಿಯಾಗಿದ್ದ ಲಾರಿ ಡ್ರೈವರ್ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ಘಟನೆಯಿಂದ ತಪ್ಪಿಸಿಕೊಳ್ಳಲು ಹಾರಿಕೆ ಉತ್ತರ ನೀಡಿದರು.
ಇನ್ನು ಈ ವಿಚಾರವಾಗಿ ಸ್ಥಳೀಯ ನಾಗರಿಕರು ಗ್ಯಾಸ್ ಏಜೆನ್ಸಿಯವರು ಮನೆಗೆ ಸಿಲಿಂಡರ್ ತಂದು ಕೊಡುತ್ತಾರೆ. ನಾವು ಅದನ್ನು ತೂಕ ಮಾಡುವುದಿಲ್ಲ 1 ರಿಂದ 2 ಕೆಜಿ ಕಡಿಮೆ ಇರುತ್ತದೆ ಎನ್ನಲಾಗುತ್ತಿದೆ. ಇನ್ನು ಮುಂದೆ ಗ್ಯಾಸ್ ಏಜನ್ಸಿಯವರು ಸಿಲಿಂಡರ್ ಕೊಡಬೇಕಾದರೆ ತೂಕ ಮಾಡಿ ಕೊಡಬೇಕು ಎಂದು ಗ್ರಾಹಕರು ಏಜನ್ಸಿಯವರನ್ನು ಒತ್ತಾಯಿಸಿದ್ದಾರೆ.