ಹಿರಿಯೂರು, ಜುಲೈ 01 :ನವದೆಹಲಿ ರಿನ್ಯೂ ಪವರ್ ಲಿಮಿಟೆಡ್ ಅವರು ನಮ್ಮ ಗ್ರಾಮದ ಬಳಿ 220 ಕೆವಿ ವಿದ್ಯುತ್ ಮಾರ್ಗ ಲೈನ್ ಅಡಿಯಲ್ಲಿ ಬರುವ ರೈತರಿಗೆ ಬಹಳ ಕಡಿಮೆ ಪರಿಹಾರ ಕೊಡುತ್ತಾ ಪೊಲೀಸ್ ರಕ್ಷಣೆಯಲ್ಲಿ ಕಾಮಗಾರಿ ಮಾಡುತ್ತಿದ್ದಾರೆ ಎಂಬುದಾಗಿ ರೈತ ಮುಖಂಡ ಮೂರುಕಣ್ಣಪ್ಪ ನವರು ಸಭೆಗೆ ತಿಳಿಸಿದರು.
ತಾಲ್ಲೂಕಿನ ಐಮಂಗಳ ಗ್ರಾಮದ ಕಲ್ಕುಂಟೇಶ್ವರಿ ದೇವಸ್ಥಾನದಲ್ಲಿ ಆ ಭಾಗದ ಮರಡಿ ದೇವಿಗೆರೆ, ಆದಿರಾಳು, ಭರಂಪುರ, ಸಿಎಂ ಮಾಳಿಗೆ, ಹುಳಿತೊಟ್ಲು ಗ್ರಾಮದ ರೈತರುಗಳ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಕುರಿತು ರೈತ ಸಂಘದ ಅಧ್ಯಕ್ಷ ಕೆ.ಟಿ.ತಿಪ್ಪೇಸ್ವಾಮಿ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಒಂದು ಕಂಬಕ್ಕೆ 12ರಿಂದ 15 ಲಕ್ಷ ಕೊಟ್ಟಿರುವುದಾಗಿ ಪವರ್ ಲಿಮಿಟೆಡ್ ಕಂಪನಿಯವರು ತಾಲ್ಲೂಕು ದಂಡಾಧಿಕಾರಿಗೆ ವರದಿ ನೀಡಿರುತ್ತಾರೆ ಎಂದು ಉಪನೊಂದಣಾಧಿಕಾರಿಗಳು ಸರ್ಕಾರದ ದಾಖಲೆ ನೀಡಿದ್ದಾರೆ.
ಆದಾಗ್ಯೂ ಈಗ ಕಾಮಗಾರಿ ಮಾಡುತ್ತಿರುವ ಕಂಪನಿಯವರು ಡಿಪಿಆರ್ ಕೊಡದೆ ನಮ್ಮ ಜಮೀನಿನಲ್ಲಿ ಮರ ಗಿಡ ಬೆಳೆ ಬಗ್ಗೆ ಇಲಾಖೆಯವರು ಮಾಲ್ಕಿ ವ್ಯಾಲ್ಯೂಯೇಷನ್ ನೀಡದೆ ಮತ್ತು ಸರ್ವೆ ಇಲಾಖೆ ಸರ್ವೆ ಮಾಡದೆ ರಾತುರವಾಗಿ ಪೊಲೀಸ್ ಬಂದೋಬಸ್ತಿನಲ್ಲಿ ಕಾಮಗಾರಿ ನಡೆಸುತ್ತಿರುವುದು ಖಂಡನೀಯ ಎಂಬುದಾಗಿ ಆರೋಪಿಸಿದರು.
ರೈತರ ಮೇಲೆ ದರ್ಪ ತೋರಿಸುತ್ತಿರುವ ಅಧಿಕಾರಿಗಳು ರೈತರೊಂದಿಗೆ ಸೌಜನ್ಯವಾಗಿ ವರ್ತಿಸಿ ಅವರಿಗೆ ಸಿಗಬೇಕಾದ ಪರಿಹಾರವನ್ನು ಕೊಡಿಸಿ ಕೊಡುವಂತಾಗಬೇಕು ಜಮೀನಿನಲ್ಲಿ ಒಂದುಸಲ ಲೈನ್ ಬಂದರೆ, ಆ ಜಮೀನಿನ ವ್ಯಾಲ್ಯೂ ಕೂಡ ಕಡಿಮೆಯಾಗುತ್ತದೆ ಎಂದರಲ್ಲದೆ.
ಮೈಸೂರು ಜಿಲ್ಲೆಯಲ್ಲಿ ಆ ಜಿಲ್ಲಾಧಿಕಾರಿಗಳು ಡಿಪಿಆರ್ ಅಲ್ಲಿರುವ ದರವನ್ನು ನಿಗದಿ ಮಾಡಿರುತ್ತಾರೆ. ಅದೇ ತರಹ ನಮ್ಮ ಜಿಲ್ಲಾಧಿಕಾರಿಗಳು ಕಂಪನಿಯ ಡಿಪಿಎಆರ್ ತರಿಸಿಕೊಂಡು ನಮ್ಮ ರೈತರಿಗೆ ಕಂಪನಿ ಕೊಡುವ ಪರಿಹಾರವನ್ನು ಕೊಡಬೇಕು ಇಲ್ಲವಾದರೆ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಸಭೆಗೆ ತಿಳಿಸಿದರು.
ಆದಿರಾಳು ನಾಗರಾಜಪ್ಪ ಮಾತನಾಡಿ, ಜಿಲ್ಲಾಧಿಕಾರಿಗಳು ಈ ಕೂಡಲೇ ಸಭೆ ಕರೆದು ಪರಿಹಾರದ ಬಗ್ಗೆ ಗೊಂದಲ ನಿವಾರಿಸದಿದ್ದಲ್ಲಿ ಸೋಮವಾರದಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಹೆಂಡತಿ-ಮಕ್ಕಳೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುವುದು ಎಂದು ಸಭೆಗೆ ತಿಳಿಸಿದರು.
ಅಂತಿಮವಾಗಿ ಇದಕ್ಕೆ ಸಭೆಯಲ್ಲಿದ್ದ ಎಲ್ಲಾ ರೈತರು ಧ್ವನಿಗೂಡಿಸಿ ನಮ್ಮ ಭಾಗದ ವಿವಿಧ ಹಳ್ಳಿಗಳಿಂದ ನೂರಾರು ಸಂಖ್ಯೆಯಲ್ಲಿ ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹವನ್ನು ಶುರು ಮಾಡೋಣ ಎಂಬ ಒಮ್ಮತದ ಅಭಿಪ್ರಾಯಕ್ಕೆ ಬಂದು ಸಭೆ ಮುಕ್ತಾಯಾಗೊಂಡಿತು.
ಈ ಸಭೆಯಲ್ಲಿ ರೈತ ಮುಖಂಡರುಗಳಾದ ಜಯಣ್ಣ ಪಾಟೀಲ್, ಎಸ್.ಎಚ್.ಈರಣ್ಣ, ಮಂಜುನಾಥ್, ರಾಜಶೇಖರ್, ತಿಮ್ಮಾರೆಡ್ಡಿ, ಶಿವಣ್ಣ, ರಂಗಸ್ವಾಮಿ, ರತ್ನಮ್ಮ, ಹೇಮಂತ್ ರಾಜ್ ಇತರರು ಉಪಸ್ಥಿತರಿದ್ದರು.