ಕನಕದಾಸರು ಯಾವುದೇ ಜಾತಿ – ಜನಾಂಗಕ್ಕೆ ಸೀಮಿತವಾದ ವ್ಯಕ್ತಿಯಲ್ಲ : ಜಿ.ಪಂ.ಅಧ್ಯಕ್ಷೆ ಶ್ರೀಮತಿ ಶಶಿಕಲಾಸುರೇಶ್ ಬಾಬು

ಹಿರಿಯೂರು : ದಾಸರಲ್ಲೇ ಅತ್ಯಂತ ಶ್ರೇಷ್ಠರಾದ ಕನಕದಾಸರನ್ನು ಯಾವುದೇ ಒಂದು ಜಾತಿ-ಜನಾಂಗಕ್ಕೆ ಸೀಮಿತಗೊಳಿಸಬಾರದು, ಅವರು ಜಾತಿ-ಮತ, ಕುಲ ಮೀರಿದ ಮಹಾನ್ ವ್ಯಕ್ತಿ. ಅಲ್ಲದೆ ಅವರು ಇಡೀ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ ಇಂತಹ ಮಹನೀಯರ ಜಯಂತಿಗಳನ್ನು ಆಚರಿಸುವುದು ನಿಜಕ್ಕೂ ಅರ್ಥಪೂರ್ಣ, ಇವರ ತತ್ವ-ಆದರ್ಶಗಳನ್ನು ಇಂದಿನ ಯುವಜನತೆ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಸುರೇಶ್ ಬಾಬು ಹೇಳಿದರು.
ನಗರದ ತಾಲ್ಲೂಕು ಕಛೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ದಾಸಶ್ರೇಷ್ಠ ಕನಕದಾಸರ 533ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನಂತರ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಡಿ.ಧರಣೇಂದ್ರಯ್ಯ ಮಾತನಾಡಿ, ಸುಮಾರು ಹದಿನಾರನೇ ಶತಮಾನದಲ್ಲೇ ಕನಕದಾಸರು ತಮ್ಮ ಕೀರ್ತನೆಗಳಿಂದ ಸಮಾಜದಲ್ಲಿನ ಅಸಮಾನತೆ ಅಸ್ಪೃಶ್ಯತೆ ಹಾಗೂ ಶೋಷಣೆಗಳ ವಿರುದ್ದ ಹೋರಾಟ ನಡೆಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂಬುದಾಗಿ ಹೇಳಿದರು.
ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಮಹಂತೇಶ್ ಹರ್ತಿಕೋಟೆ ಮಾತನಾಡಿ, ಈ ನಾಡಿನ ದಾಸ ಪರಂಪರೆಯಲ್ಲಿ ಬಂದಂತಹ ಶ್ರೇಷ್ಠ ದಾಸರಾದ ಕನಕದಾಸರು ತಮ್ಮ ಸಂಕೀರ್ತನೆಗಳ ಮೂಲಕ ಸಾಮಾಜಿಕ ನ್ಯಾಯದಡಿ, ಸಮಾನತೆಯ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಮಹಾನ್ ದಾರ್ಶನಿಕರು ಎಂಬುದಾಗಿ ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ತಹಶೀಲ್ದಾರ್ ಜಿ.ಹೆಚ್.ಸತ್ಯನಾರಾಯಣ ರವರು ಮಾತನಾಡಿ, ಸಮಾಜದಲ್ಲಿ ಕನಕದಾಸರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತವಿದ್ದು, ಅವರ ಕೀರ್ತನೆಗಳು ಜೀವನದ ಮೌಲ್ಯ ಸಾರುವ ಸಂದೇಶಗಳಾಗಿವೆ. ಅವರ ಚಿಂತನೆಗಳನ್ನು ಸಮಾಜದ ಎಲ್ಲಾ ಜನರು ಬದುಕಿನಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದರು.
ಸಭೆಯಲ್ಲಿ ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಓಂಕಾರಪ್ಪ, ಪಿಡ್ಯೂಡಿ ಮಂಜಣ್ಣ ಮುಂತಾದವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಲಕ್ಷ್ಮೀದೇವಮ್ಮ, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಂಷುವುನ್ನೀಸಾ, ನಗರಸಭೆ ಕಮೀಷನರ್ ಟಿ.ಲೀಲಾವತಿ, ಸಮಾಜಕಲ್ಯಾಣಅಧಿಕಾರಿ ಕೃಷ್ಣಮೂರ್ತಿ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಹನುಮಂತಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ರಾಮಯ್ಯ, ನಗರಸಭೆ ಸದಸ್ಯರುಗಳಾದ ಶಿವರಂಜಿನಿ ಯಾದವ್, ಮದಲಮೇರಿ, ರತ್ನಮ್ಮ, ಕವಿತಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಮಧುರೆ, ಕುರುಬ ಸಮಾಜದ ಮುಖಂಡರುಗಳಾದ ಗಿರಿಜಪ್ಪ, ವೆಂಕಟೇಶ್, ಜಯರಾಂ, ವೀರಣ್ಣ ಮಸ್ಕಲ್, ಕೃಷ್ಣಮೂರ್ತಿ, ಸಿದ್ದೇಶ್ ಇಕ್ಕನೂರು, ಗೋವಿಂದಪ್ಪ, ರಘು ಹರ್ತಿಕೋಟೆ, ಕಾಂತ್ ರಾಜ್ ಹುಲಿ, ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು.

Leave a Reply

Your email address will not be published.

Send this to a friend