ಹಿರಿಯೂರು : ತಾಲ್ಲೂಕಿನ ಗ್ರಾಮಪಂಚಾಯಿತಿಗಳಲ್ಲಿ ಇ ಸ್ವತ್ತು ಮಾಡಿಸಿಕೊಡುವಲ್ಲಿ ಅಧಿಕಾರಿಗಳು ನಾಗರೀಕರಿಗೆ ಸರಿಯಾದ ಸಹಕಾರ ನೀಡುತ್ತಿಲ್ಲವೆಂಬುದಾಗಿ ಜನರಿಂದ ದೂರು ಕೇಳಿ ಬರುತ್ತಿದ್ದು, ಈ ಕೂಡಲೇ ಜನರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವ ಮೂಲಕ ಅವರ ಕೆಲಸಗಳನ್ನು ಮಾಡಿಕೊಡಬೇಕು ಇಲ್ಲವಾದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂಬುದಾಗಿ ಜಿ.ಪಂ.ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬುರವರು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಗರದ ಸಾಮರ್ಥ್ಯ ಸೌಧದಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಕುಡಿಯುವ ನೀರಿನ ಸಹಾಯಕ ಇಂಜಿನಿಯರ್ ಗಳಿಗಾಗಿ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.
ಗ್ರಾಮಗಳಲ್ಲಿ 15 ನೇ ಹಣಕಾಸಿನ ಕ್ರಿಯಾ ಯೋಜನೆಯ ಅಡಿಯಲ್ಲಿ ಕುಡಿಯುವ ನೀರು ಹಾಗೂ ಮೂಲಸೌಕರ್ಯಗಳನ್ನು ಜನರ ಮನೆಯ ಬಾಗಿಲಿಗೆ ತಲುಪಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಈ ಕೂಡಲೇ ಸೌಕರ್ಯಗಳು ಫಲಾನುಭವಿಗಳಿಗೆ ಸಕಾಲದಲ್ಲಿ ಪೂರೈಕೆಯಾಗಬೇಕು ಎಂಬುದಾಗಿ ಸೂಚಿಸಿದರು.
ಈ ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀದೇವಿ, ಉಪಾಧ್ಯಕ್ಷರಾದ ಪುಷ್ಪ ರಂಗನಾಥ್, ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ತ್ರಿವೇಣಿ, ಶಿವಪ್ರಸಾದ್ ಗೌಡ್ರು, ಸದಸ್ಯರಾದ ನಾಗೇಂದ್ರನಾಯ್ಕ, ಗೀತಾ ನಾಗಕುಮಾರ್, ರಾಜೇಶ್ವರಿ, ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷರಾದ ಓಂಕಾರಪ್ಪ, ತಾ.ಪಂ.ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.