ಚಿತ್ರದುರ್ಗ : ವಿಷಪೂರಿತ ಮೇವು ತಿಂದು 40 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸರಸ್ಪತಿಹಟ್ಟಿ, ಹೊಸಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಿತ್ತಪ್ಪ ಮತ್ತು ಕೆಂಚಪ್ಪ ಇವರಿಗೆ ಸೇರಿದ ಕುರಿಗಳು ಎಂದು ತಿಳಿದು ಬಂದಿದೆ. ಗುರುವಾರ ಕುರಿ ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಸಂಜೆಯ ವೇಳೆಯಲ್ಲಿ ಬಿಳಿ ಜೋಳದ ಸೆಪ್ಪೆಯ ಚಿಗುರು ತಿಂದು ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ. ತಾಲ್ಲೂಕು ಪಶು ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸುಮಾರು 300 ಕುರಿಗಳಲ್ಲಿ 250 ಕ್ಕೂ ಹೆಚ್ಚು ಕುರಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಇದರಲ್ಲಿ 40 ಕ್ಕೂ ಕುರಿಗಳು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದವೆ.
ವಿಷಯ ತಿಳಿದ ತಕ್ಷಣ ಹಿರಿಯೂರು ತಹಶೀಲ್ದಾರ್ ಜಿ. ಸತ್ಯನಾರಾಯಣ, ವೃತ್ತ ನಿರೀಕ್ಷಕ ರಾಘವೇಂದ್ರ, ಪಿಎಸ್ಐ ಪರಮೇಶ ಹಾಗೂ ಶಾಸಕರ ಆಪ್ತ ಕಾರ್ಯದರ್ಶಿ ನಿರಂಜನ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಕುರಿ ಕಳೆದುಕೊಂಡ
ಕುರಿಗಾಹಿಗಳ ಆಕ್ರಂದನ ಮುಗಿಲು ಮುಟ್ಟಿದೆ. ಹಿರಿಯೂರು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಕುರಿಗಾರರ ಜೊತೆ ದೂರವಾಣಿ ಮೂಲಕ ಮಾತನಾಡಿ ಸಾಂತ್ವನ ಹೇಳಿದರು. ಅದಲ್ಲದೆ ವೈಯಕ್ತಿಕ ಪರಿಹಾರ ನೀಡುವ ಮೂಲಕ ಸಹಾಯ ಮಾಡುತ್ತೇನೆ ಹಾಗೂ ಸರ್ಕಾರದಿಂದ ಸಹಾಯ ಮಾಡಿಸುತ್ತೆನೆಂದು ಭರವಸೆ ನೀಡಿದರು.