ಇಡೀ ವರ್ಷದ ಸಿಹಿ-ಕಹಿ ಅನುಭವಗಳನ್ನು ಮೆಲುಕು ಹಾಕಿ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಮರೆಯಾದ ದಿನಕರ

ಹಿರಿಯೂರು : ಈ ಬಾರಿಯ 2020ನೇ ಇಸವಿಯ ಹೊಸವರ್ಷದ ಆರಂಭವು ಕೊರೊನಾ ಎಂಬ ಮಾರಕ ರೋಗದ ಆತಂಕವನ್ನು ದೇಶದೆಲ್ಲೆಡೆ ಹರಡುವ ಮೂಲಕ ಇಡೀ ದೇಶವೇ “ಲಾಕ್-ಡೌನ್” ಘೋಷಣೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿಸಿದ್ದರ ಪರಿಣಾಮ ಸಾವಿರಾರು ಜನ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ನಗರಗಳನ್ನು ತೊರೆದು ಹಳ್ಳಿಗಳತ್ತ ಧಾವಿಸುವಂತಾಯಿತು.
ತಾಲ್ಲೂಕಿನಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಭದ್ರೆಯ ನೀರು ವಾಣಿವಿಲಾಸ ಸಾಗರಕ್ಕೆ ಹರಿದು ಬಂದುದಲ್ಲದೆ, ಸಮೃದ್ಧ ಮಳೆಯಿಂದಾಗಿ ಜಲಾಶಯದ ಮಟ್ಟ ಸುಮಾರು 105 ಅಡಿಗಿಂತ ಹೆಚ್ಚು ನೀರು ವಾಣಿವಿಲಾಸ ಸಾಗರದಲ್ಲಿ ಶೇಖರಣೆಗೊಂಡದ್ದರಿಂದಾಗಿ ಕೃಷಿ ಚಟುವಟಿಕೆಗಳು ಗರಿಗೆದರಿ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತಲ್ಲದೆ ಕೆಲಸ ಕಳೆದುಕೊಂಡು ಹಳ್ಳಿಗಳ ಕಡೆ ಮುಖಮಾಡಿಬಂದ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಟ್ಟಿತು.
ಜನರ ಜೀವನಾಡಿಯಾಗಿರುವ ವಾಣಿವಿಲಾಸ ಸಾಗರವು ಇಂದು ಮೈತುಂಬಿಕೊಂಡು ಪ್ರವಾಸಿಗರ ಅತ್ಯಂತ ಸುಂದರ ಆಕರ್ಷಣೀಯ ತಾಣವಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುವ ಜೊತೆಗೆ ದೋಣಿವಿಹಾರ ಆರಂಭವಾಗುವ ನಿರೀಕ್ಷೆಯಲ್ಲಿದೆ. ಹೀಗೆ 2020ನೇ ಇಸವಿಯು ತಾಲ್ಲೂಕಿನ ಜನತೆಗೆ ಬೇವು-ಬೆಲ್ಲಗಳನ್ನು ಸಮನಾಗಿ ಉಣಬಡಿಸುವ ಜೊತೆಗೆ ಬದುಕಿನ ಮಹತ್ವವನ್ನು ಜನರಿಗೆ ಪರಿಚಯಿಸಲಾಯಿತು.
ಈ 2020ನೇ ಇಸವಿಯ ಸಿಹಿ-ಕಹಿ ಅನುಭವಗಳನ್ನು ಜಗತ್ತಿಗೆ ತನ್ನ ಬೆಳಕಿನಲ್ಲಿ ಪರಿಚಯಿಸಿದ ಸೂರ್ಯನು ಇಂದಿನ ಕೊನೆಯ ಸೂರ್ಯಾಸ್ತಮದಲ್ಲಿ ತನ್ನ ಎಲ್ಲಾ ನೆನಪುಗಳನ್ನು ಮೆಲುಕುಹಾಕುವ ಮೂಲಕ ವಾಣಿವಿಲಾಸ ಸಾಗರ ಜಲಾಶಯದ ಹಿನ್ನೀರಿನಲ್ಲಿ ಕೆಂಬೆಳಕಿನ ರಂಗನ್ನು ಚೆಲ್ಲಿ ಮೋಡದೊಳಗೆ ಮರೆಯಾಗಿ ಈ ಜಗತ್ತಿಗೆ ವಿದಾಯ ಹೇಳುವ ಮನಮೋಹಕ ದೃಶ್ಯವನ್ನು ಸೆರೆಯಿಡಿಯಲಾಗಿದೆ.

Leave a Reply

Your email address will not be published.

Send this to a friend