ಚಿತ್ರದುರ್ಗ: ಪಂಪ್ ಸೆಟ್ ಗೆ ನಿರಂತರ ಜ್ಯೋತಿ ಸಂಪರ್ಕದಿಂದ ಅಕ್ರಮವಾಗಿ ವಿದ್ಯುತ್ ಪಡೆದುಕೊಂಡಿದ್ದ ವೈರನ್ನು ಕತ್ತರಿಸಿಕೊಂಡು ಬಂದ ಲೈನ್ ಮನ್ ಮೇಲೆ ಚಪ್ಪಲಿ ಹಾಗೂ ಕೈಗಳಿಂದ
ಹಲ್ಲೆ ನಡೆಸಿ, ಮಚ್ಚಿಡಿದುಕೊಂಡು ಕಚೇರಿ ಮುಂದೆ ಜೀವ ತೆಗೆಯುತ್ತೇನೆ ಎಂದು ಓಡಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಐಮಂಗಲ ಬಳಿ ಇರುವ ಶಿವರಾಜ್, ನಿತಿನ್ ಹಾಗೂ ಚೇತನ ಎಂಬ ಮೂವರು ತಮ್ಮ ಜಮೀನಿನ ಪಂಪ್ ಸೆಟ್ ಗೆ ನಿರಂತರ ಜ್ಯೋತಿ ಸಂರ್ಪಕದಿಂದ ಅಕ್ರಮವಾಗಿ ವೈರ್ ಎಳೆದುಕೊಂಡು ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡಿರುವುದು ಲೈನ್ ಮನ್ ಕೇಶವ ಎನ್ನುವವರ ಗಮನಕ್ಕೆ ಬಂದಿತ್ತು. ಈ ವಿಷಯವನ್ನು ಮೇಲಾಧಿಕಾರಿಗಳಿಗೆ ತಿಳಿಸಿದ್ದಾರೆ. ಅಕ್ರಮವಾಗಿ ಸಂಪರ್ಕ ಪಡೆದಿರುವ ಕೇಬಲ್ ನ್ನು ಕಟ್ ಮಾಡಿಕೊಂಡು ಬರಲು ಅಧಿಕಾರಿಗಳು ಆದೇಶಿಸಿದ್ದಾರೆ. ಅದರಂತೆ ಕೇಶವ ಹೋಗಿ ವಿದ್ಯುತ್ ಲೈನ್ ಕಟ್ ಮಾಡಿಕೊಂಡು ಬಂದಿದ್ದಾರೆ. ಲೇನ್ ಕಟ್ ಮಾಡಿಕೊಂಡು ಬಂದಿರುವ ವಿಚಾರ ತಿಳಿಯುತ್ತಿದ್ದಂತೆ ಕೋಪಗೊಂಡು ರಸ್ತೆಯಲ್ಲಿಯೇ ಶಿವರಾಜ್, ಚೇತನ್ ಹಾಗೂ ನಿತಿನ್ ಮೂರು ಜನರು ಕೇಶವನ ಮೇಲೆ ಚಪ್ಪಲಿ , ಮತ್ತು ಕೈಗಳಿಂದ ಹಲ್ಲೆ ಮಾಡಿದ್ದಾರೆ. ರಸ್ತೆಯಲ್ಲಿಯೇ ಓಡಾಡಿಸಿದ್ದಾರೆ. ನಂತರ ಶಿವರಾಜ್ ಮಚ್ಚು ಹಿಡಿದು ಕೊಂದು ಹಾಕುತ್ತೆನೆ ಅವನನ್ನು ಬರಲು ಬಿಡಿ ಎಂದು ಅಬ್ಬರಿಸಿರುವದು ವಿಡಿಯೋದಲ್ಲಿ ಕೇಳಿ ಬರುತ್ತದೆ. ಇದರಿಂದ ಹಲ್ಲೆಗೊಳಗಾದ ಬೆಸ್ಕಾಂ ನೌಕರರಾದ ಕೇಶವ ಹಾಗೂ ಪುಟ್ಟಪ್ಪ, ಹಲ್ಲೆ ಮಾಡಿದವರ ವಿರುದ್ಧ ಐಂಮಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.