ಹಿರಿಯೂರು: ದೇಶದ ವಿವಿಧೆಡೆ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ಒಟ್ಟುಗೂಡಿಸಿ ಕನ್ನಡಿಗರದೇ ಒಂದು ಪ್ರತ್ಯೇಕ ರಾಜ್ಯವನ್ನು ಕಟ್ಟಿಕೊಂಡ ಈ ಶುಭದಿನವನ್ನು ಕನ್ನಡಿಗರು ನಾಡಹಬ್ಬವಾಗಿ ಕನ್ನಡ ರಾಜ್ಯೋತ್ಸವ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದು, ಕನ್ನಡಿಗರಿಗೆ ಇದೊಂದು ಹೆಮ್ಮೆಯ ದಿನವಾಗಿದೆ ಎಂಬುದಾಗಿ ವಾಣಿ ಕಾಲೇಜಿನ ಪ್ರಾಂಶುಪಾಲರಾದ ಧರಣೇಂದ್ರಯ್ಯ ಹೇಳಿದರು.
ನಗರದ ತಾಲ್ಲೂಕು ಕಛೇರಿಯ ಆವರಣದಲ್ಲಿ ರಾಷ್ಟ್ರೀಯಹಬ್ಬಗಳ ಆಚರಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ 65ನೇ ವರ್ಷದ ಕನ್ನಡರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿವರ್ಷ ಸಡಗರ ಸಂಭ್ರಮದಿಂದ ಆಚರಣೆ ಮಾಡುತ್ತಿದ್ದ ಕನ್ನಡ ರಾಜ್ಯೋತ್ಸವ ಹಬ್ಬವನ್ನು ಮಾರಕ ಕೊರೊನಾ ರೋಗದಿಂದಾಗಿ ಸರಳವಾಗಿ ಆಚರಣೆ ಮಾಡಲಾಗುತ್ತಿದ್ದು, ಸಾರ್ವಜನಿಕರು ಸರ್ಕಾರದ ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಮಾರಕ ಕೊರೊನಾ ರೋಗದ ಬಗ್ಗೆ ಜಾಗೃತಿ ವಹಿಸಬೇಕು ಎಂಬುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ತಹಶೀಲ್ದಾರ್ ಜಿ.ಎಚ್.ಸತ್ಯನಾರಾಯಣ ಮಾತನಾಡಿ, ಈ ಕನ್ನಡನಾಡಿನ ನೆಲ-ಜಲ ರಕ್ಷಣೆಗಾಗಿ, ಕನ್ನಡನಾಡಿನ ಏಕೀಕರಣಕ್ಕಾಗಿ ಅನೇಕ ಮಹನೀಯರುಗಳು ಹೋರಾಟ ನಡೆಸಿದ್ದು ಈ ನಿಟ್ಟಿನಲ್ಲಿ ಆಲೂರುವೆಂಕಟರಾಯರು, ಬಿ.ಎಂ.ಶ್ರೀಕಂಠ ಯ್ಯನವರು, ಅ.ನ.ಕೃಷ್ಣರಾಯರು, ಕಡಿದಾಳುಮಂಜಪ್ಪ, ಕೆಂಗಲ್ ಹನುಮಂತಯ್ಯ, ಹೆಚ್.ಎಸ್.ದೊರೆಸ್ವಾಮಿ, ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವು ಮಹನೀಯರುಗಳು ಹಾಗೂ ಕನ್ನಡಪರ ಹೋರಾಟಗಾರರನ್ನು ಸ್ಮರಿಸುವುದು ನಮ್ಮನಿಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಕನ್ನಡ ಕಾದಂಬರಿಕಾರ ಡಿ.ಸಿ.ಪಾಣಿ, ಶಿವಕುಮಾರ್ ಕಂದಿಕೆರೆ, ಕೋಲಾಟ ಕಲಾವಿದ ತಿಪ್ಪೇಸ್ವಾಮಿ, ಸೋಭಾನೆ ಕಲಾವಿದೆ ಸಾಲುಣಿಸೆ ಶಾರದಮ್ಮ ಹಾಗೂ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ನಲ್ಲಿ ಕನ್ನಡದಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಡಿವೈಎಸ್ಪಿ ಜಮೀರ್ ಅಹಮದ್, ಸಿಪಿಐ ರಾಘವೇಂದ್ರ, ನಗರಸಭೆ ಪೌರಾಯುಕ್ತೆ ಟಿ.ಲೀಲಾವತಿ, ಪಿಎಸ್ಐ ಗಳಾರ ನಾಗರಾಜ್, ಅನುಸೂಯಮ್ಮ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ್ ಮಧುರೆ, ಕಸಾಪ ಅಧ್ಯಕ್ಷ ಮಹಾಸ್ವಾಮಿ ಹರ್ತಿಕೋಟೆ, ನಾಗರಾಜ ಆಚಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.