ಬಿಜೆಪಿ ಸುಳ್ಳು ಹಾಗೂ ಪ್ರಚಾರದ ಪಕ್ಷ : ಮಾಜಿ ಸಚಿವ ಡಿ. ಸುಧಾಕರ್

ಹಿರಿಯೂರು (ಆಗಸ್ಟ್ 13): ಭಾರತೀಯ ಜನತಾ ಪಾರ್ಟಿ ಸುಳ್ಳಿನ ಪಕ್ಷ ಹಾಗೂ ಪ್ರಚಾರದ ಪಕ್ಷವಾಗಿದೆ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹಿಂದುಳಿದ ವರ್ಗದ ಜಾತಿ ಪಟ್ಟಿಯಿಂದ ಕೈಬಿಟ್ಟಿದ್ದರು. ಇದನ್ನು ಕಾಡುಗೊಲ್ಲ ಸಮಾಜದವರು ಅರ್ಥಮಾಡಿಕೊಳ್ಳಬೇಕು, ಆಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ಹಿರಿಯೂರು ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ 100 ಕಿಲೋಮೀಟರ್ ಪಾದಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಮ್ಮನಹಟ್ಟಿ ಗ್ರಾಮದಲ್ಲಿ ಮಾತಾನಾಡಿದರು.

ಕಾಂಗ್ರೆಸ್ ಪಕ್ಷ ಬಿಟ್ಟರೆ ಬೇರೆ ಯಾರೂ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡಿದೆ. ನಾಲ್ಕುವರೆ ವರ್ಷ ಕಳೆದರೂ ಕಾಡುಗೊಲ್ಲರಿಗೆ ಮೀಸಲಾತಿ ಕೊಡಲು ಸಾಧ್ಯವಾಗಿಲ್ಲ. ಬಿಜೆಪಿಯವರು ಯಾವುದೇ ಕಾರಣಕ್ಕೂ ಮೀಸಲಾತಿಗೆ ಸೇರಿಸುವುದಿಲ್ಲ ಎಂದರು. ಅವರು ನಿಮ್ಮಿಂದ ಮತ ಪಡೆದುಕೊಳ್ಳುತ್ತಾರೆ. ಕೆಲಸ ಮಾಡುವ ಪಕ್ಷಕ್ಕೆ ಮತ ನೀಡದೇ ಬಿಜೆಪಿಗೆ ಮತ ನೀಡುತ್ತಿರಾ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಈ ತಪ್ಪು ಮಾಡಬಾರದು. ಕಾಂಗ್ರೆಸ್ ಪಕ್ಷಕ್ಕೆ ಆಶಿರ್ವಾದ ಮಾಡಬೇಕು ಎಂದು ಹೇಳಿದರು.

ನಾನು ಮೂರು ಬಾರಿ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ಕಾಡುಗೊಲ್ಲರು ನನ್ನ ಪರವಾಗಿ ಹೇಳಿಕೊಳ್ಳುವಷ್ಟು ಇರಲಿಲ್ಲ. ಈ ಬಾರಿ ಈ ಸಮುದಾಯದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ಇಟ್ಟುಕೊಂಡಿದ್ದೇನೆ, ಈ ಬಾರಿ ನನ್ನ ಕೈಹಿಡಿಯುತ್ತಿರಾ, ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುತ್ತಿರಾ ಎಂಬ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಳೆದ ನಾಲ್ಕು ವರ್ಷಗಳಿಂದ ಗೊಲ್ಲರಹಟ್ಟಿಗಳು ಹಾಗೂ ಕ್ಷೇತ್ರದಲ್ಲಿ
ಯಾವುದೇ ಅಭಿವೃದ್ಧಿ ಹೊಂದಿಲ್ಲ ಎಂದು ಹೆಸರು ಹೇಳದೇ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಟೀಕಿಸಿದರು.

ನಾನು ಶಾಸಕನಾದ ಸಂದರ್ಭದಲ್ಲಿ ಮನೆಗಳು, ಸಿಸಿ ರಸ್ತೆ ನಿರ್ಮಾಣ, ಹೈಮಾಸ್ಟ್ ದೀಪ ಈಗೆ ಅಭಿವೃದ್ಧಿ ಕಾಮಗಾರಿ ಕೆಲಸ ಮಾಡಲಾಗಿತ್ತು. ಗ್ರಾಮದ ರಂಗನಾಥ ದೇವಸ್ಥಾನಕ್ಕೆ 5 ಲಕ್ಷ, ರಸ್ತೆ ಅಭಿವೃದ್ಧಿಗೆ 25 ಲಕ್ಷ ಹಣ ಕೊಡಲಾಗಿತ್ತು, ಕಳೆದ ನಾಲ್ಕು ವರ್ಷಗಳಿಂದ ಒಂದು ರೂಪಾಯಿ ಕೆಲಸ ಆಗಿಲ್ಲ ಎಂದು ಹೇಳಿದರು.

ಬೆನ್ನು ತಟ್ಟಿದವರಿಗೆ ಪ್ರೋತ್ಸಾಹ ನೀಡಿ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದರು.

ನೃತ್ಯಕ್ಕೆ ಹೆಜ್ಜೆ ಹಾಕಿದ ಅಧ್ಯಕ್ಷೆ : ಪಾದಯಾತ್ರೆ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಎಸ್. ಶಿವರಂಜನಿ ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್ ಸೇರಿದಂತೆ ಮತ್ತಿತರರು ನೃತ್ಯಕ್ಕೆ ಹೆಜ್ಜೆ ಹಾಕಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಎಸ್, ಶಿವರಂಜನಿ, ಕಾಂಗ್ರೆಸ್ ಮುಖಂಡ ಜಿ. ಜಯರಾಮಯ್ಯ, ಮಾಜಿ ಜಿಪಂ ಸದಸ್ಯ ಆರ್ ನಾಗೇಂದ್ರ ನಾಯ್ಕ, ಸೇರಿದಂತೆ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.

Leave a Reply

Your email address will not be published.

Send this to a friend