ಹಿರಿಯೂರು ನಗರದಲ್ಲಿ ಬೆಂಕಿಗೆ ಆಹುತಿಯಾದ ಎಲೆಕ್ಟ್ರಿಕ್ ಸ್ಕೂಟಿ

ಚಿತ್ರದುರ್ಗ (ಆಗಸ್ಟ್ 29): ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ಸಂಭವಿಸಿದೆ. ಇದೀಗ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೆಂಕಿಗೆ ಆಹುತಿಯಾಗಿ ಸ್ಕೂಟಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇನ್ನು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಿಂದ ಮಹಿಳೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಹಿಳೆಯೊಬ್ಬರು ಸ್ಕೂಟಿ ಚಲಾಯಿಸುತ್ತಿದ್ದರು. ಸ್ಕೂಟಿ ಗೆ ಬಸ್ ಡಿಕ್ಕಿಯಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಬಸ್ ಡಿಕ್ಕಿಯಾದ ರಭಸಕ್ಕೆ ಎಲೆಕ್ಟ್ರಾನಿಕ್ ಸ್ಕೂಟಿ ಕೆಳಗಡೆ ಬಿದ್ದಿದೆ. ಬಿದ್ದ ರಭಸಕ್ಕೆ ಸ್ಕೂಟಿ ಬೆಂಕಿ ಸಂಭವಿಸಿ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸ್ಕೂಟಿ ಚಲಾಯಿಸುತ್ತಿದ್ದ ಮಹಿಳೆಯ ಹೆಸರು ಹಾಗೂ ಗುರುತು ಪತ್ತೆಯಾಗಿಲ್ಲ. ಆಕೆಯೂ ಗಾಯಗೊಂಡಿದ್ದು ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.

ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ದೂರ ಸರಿದಿದ್ದಾಳೆ. ಕ್ಷಣಾರ್ಧದಲ್ಲೇ ಬೆಂಕಿ ಧಗಧಗಿಸಿದೆ. ಸ್ಕೂಟರ್ ಹೊತ್ತಿ ಉರಿದಿದೆ. ತಕ್ಷಣ ನೆರವಿಗೆ ಬಂದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಹಿರಿಯೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ದೇಶದಲ್ಲಿ ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಘಟನೆ ಹೆಚ್ಚಾಗಿದೆ. ಈಗಾಗಲೇ ದೇಶದ ಹಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡ ಸಂಪೂರ್ಣ ಸ್ಕೂಟರ್ ಆಹುತಿಯಾದ ಘಟನೆ ವರದಿಯಾಗುತ್ತಿವೆ.

Leave a Reply

Your email address will not be published.

Send this to a friend