ಚಿತ್ರದುರ್ಗ : ಮುಂದೆ ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಹಿಂಬದಿಯಿಂದ ಬಂದ ಏಷಿಯನ್ ಪೈಂಟ್ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಏಷಿಯನ್ ಪೈಂಟ್ ಲಾರಿ ಧಗ ಧಗನೇ ಹೊತ್ತಿ ಉರಿಯುತ್ತಿದ್ದು, ಅಪಾರ ಪ್ರಮಾಣದ ಪೈಂಟ್ ಹಾನಿಯಾಗಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ – ಗೋರಲಡುಕು ಸಮೀಪದ ಓಂ ಶಕ್ತಿ ಹೋಟೆಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿ ಬಳಿ ಘಟನೆ ತಡರಾತ್ರಿ ನಡೆದಿದೆ. ಬೆಂಗಳೂರು ಕಡೆಯಿಂದ ಹುಬ್ಬಳ್ಳಿ ಕಡೆಗೆ ಏಷಿಯನ್ ಪೈಂಟ್ ಲಾರಿ ಹೋಗುತ್ತಿತ್ತು ಎಂದು ತಿಳಿದು ಬಂದಿದೆ. ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗದಲ್ಲಿ ಹಾನಿಯಾಗಿದ್ದು, ಏಷಿಯನ್ ಪೈಂಟ್ ಬಾಕ್ಸ್ ಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಸಧ್ಯ ಯಾವುದೇ ಪ್ರಾಣ ಅಪಾಯ ಸಂಭವಿಸಿಲ್ಲ. ಲಾರಿ ಹೊತ್ತಿ ಉರಿಯುತ್ತಿದ್ದಂತೆ ಲಾರಿ ಚಾಲಕ ಕಣ್ಮರೆಯಾಗಿದ್ದಾನೆ ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಲಾರಿ ಮತ್ತು ಏಷಿಯನ್ ಪೈಂಟ್ ಬಣ್ಣದ ಬಾಕ್ಸ್ ಗಳ ಮಾಲೀಕರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.