ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ದಾರಿದೀಪವಾಗಲಿ : ಕೆ. ಪೂರ್ಣಿಮಾ

ಹಿರಿಯೂರು ( ಆಗಸ್ಟ್ ೧೫): ನಮ್ಮ ದೇಶದಲ್ಲಿ ಬೃಹತ್ ಸಂವಿಧಾನವನ್ನು ರಚಿಸುವ ಮೂಲಕ ಹಲವಾರು ಜಾತಿ, ಮತ, ಧರ್ಮ,ಸಂಸ್ಕೃತಿಯಿಂದ ಕೂಡಿದ ವಿವಿಧತೆ ಹೊಂದಿದ ರಾಷ್ಟ್ರದ ಜನರು ಏಕತೆಯಿಂದ ಒಟ್ಟಾಗಿ ಬಾಳುವಂತೆ ಮಾಡಿದ ಡಾ.ಅಂಬೇಡ್ಕರ್ ರವರ ಚಿಂತನೆಗಳು, ಸ್ವತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರರ ತ್ಯಾಗ, ಬಲಿದಾನ, ದೇಶಪ್ರೇಮ, ಧೈರ್ಯ, ಸಾಹಸಗಳು ಇಂದಿನ ವಿದ್ಯಾರ್ಥಿಗಳಿಗೆ ದಾರಿದೀಪವಾಗಬೇಕು, ಆಗ ಮಾತ್ರ ಉತ್ತಮ ಸಧೃಢ ಸಮಾಜದ ನಿರ್ಮಾಣ ಸಾಧ್ಯ ಎಂಬುದಾಗಿ ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ನಗರದ ತಾಲ್ಲೂಕು ಯುವ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ದೇಶದ 75 ನೇ ಸ್ವಾತಂತ್ರ್ಯ ಮಹೋತ್ಸವದ ಈ ಸುಸಂದರ್ಭದಲ್ಲಿ ತಾಲ್ಲೂಕಿನ ವಾಣಿವಿಲಾಸ ಸಾಗರ ಜಲಾಶಯ ತುಂಬಿ, ಕೋಡಿ ಬೀಳುವ ಸಮಯ ಹತ್ತಿರವಾಗಿದ್ದು, ಬರದ ತಾಲ್ಲೂಕು ಎಂದೇ ಹೆಸರಾದ ನಮ್ಮ ತಾಲ್ಲೂಕು ಇದೀಗ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ತಾಲ್ಲೂಕಿನ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ, ಈ ಸಂದರ್ಭದಲ್ಲಿ ತಾಲ್ಲೂಕಿನ ಜನರಿಗೆ ಜಲಾಶಯ ನಿರ್ಮಿಸಿ, ನೆರವಾದ ಮೈಸೂರು ಮಹಾರಾಜರನ್ನು ನಾವೆಲ್ಲರೂ ಸ್ಮರಿಸಬೇಕು ಎಂಬುದಾಗಿ ಅವರು ಹೇಳಿದರು.
ತಾಲ್ಲೂಕಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಿಂದ ಜಲಾಶಯಕ್ಕೆ ನೀರು ಹರಿಸಲಾಗಿದ್ದು, ಅಲೆಮಾರಿ ಜನರಿಗೆ ಶಾಶ್ವತಸೂರು ಕಲ್ಪಿಸಲಾಗಿದೆ, ತಾಲ್ಲೂಕಿನಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯ, ಹೈಟೆಕ್ ಆಸ್ಪತ್ರೆ, ಬಸ್ ಡಿಪೋ, 70 ಕೋಟಿ ಅನುದಾನದ ಚೆಕ್ ಡ್ಯಾಂ , ಸುಸಜ್ಜಿತ ಬಿಇಓ ಕಚೇರಿ, ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕ್ಷೇತ್ರದಲ್ಲಿ ಶುದ್ಧ ಕುಡಿಯುವ ನೀರು, ಶಿಕ್ಷಣ, ಆರೋಗ್ಯ, ಸೂರು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಹ ತಾಲ್ಲೂಕನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.

ಧ್ವಜಾರೋಹಣ ನೆರವೇರಿಸಿದ ತಾಲ್ಲೂಕು ತಹಶೀಲ್ದಾರ್ ಪ್ರಶಾಂತ್ ಪಾಟೀಲ್ ಮಾತನಾಡಿ, ಬ್ರಿಟಿಷ್ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಲು ಹಲವಾರು ಮಹಾತ್ಮರು ತಮ್ಮ ಪ್ರಾಣತ್ಯಾಗ ಮಾಡಿದ್ದು, ಅವರ ಪರಿಶ್ರಮಕ್ಕೆ ಫಲ ಸಿಗಬೇಕಾದರೆ ಇಂದಿನ ಯುವಕರು ದೇಶವನ್ನು ಸುಂದರ, ಸುಭದ್ರ, ಶಾಂತಿಯುತ ರಾಷ್ಟ್ರವಾಗಿ ರೂಪಿಸಬೇಕೆಂಬ ಹೋರಾಠಗಾರರ ಕನಸನ್ನು ನನಸುಮಾಡುವತ್ತ ಹೆಜ್ಜೆ ಹಾಕಬೇಕು ಎಂಬುದಾಗಿ ಹೇಳಿದರು.

ಸ್ವಾತಂತ್ರ್ಯ ನಂತರ ದೇಶದಲ್ಲಿ ಆರೋಗ್ಯ ಕರ್ನಾಟಕ ಯೋಜನೆ, ರಾಷ್ಟ್ರೀಯ ಶಿಕ್ಷಣ ನೀತಿ, ರೈತಪರ ಯೋಜನೆ, ಹೀಗೆ ಹಲವಾರು ಯೋಜನೆಯಳ ಮೂಲಕ ಬಡವರು, ನೊಂದವರ ಕಣ್ಣಿರು ಒರೆಯುವ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಬಿಸಿಯೂಟ, ಸಮವಸ್ತ್ರ, ಉಚಿತ ಸೈಕಲ್ ವಿತರಣೆ ಜೊತೆಗೆ ಇದೀಗ ರೈತರ ಮಕ್ಕಳಿಗಾಗಿ ವಿದ್ಯಾರ್ಥಿವೇತನ ನೀಡುವ ಯೋಜನೆಯನ್ನು ಸಹ ನಮ್ಮ ಸರ್ಕಾರದಿಂದ ಜಾರಿಗೊಳಿಸಲಾಗಿದೆ ಎಂಬುದಾಗಿ ಹೇಳಿದರು.

ಇದೇ ಸಂದರ್ಭದಲ್ಲಿ ತಾಲ್ಲೂಕಿನ ಮಾಜಿ ಹಾಗೂ ಹಾಲಿ ಸೈನಿಕರು, ಎಸ್.ಎಸ್.ಎಲ್.ಸಿ ಯಲ್ಲಿ ಅತಿಹೆಚ್ಚು ಅಂಕಪಡೆದ ವಿದ್ಯಾರ್ಥಿಗಳು ಹಾಗೂ ನಗರಸಭೆ ಪೌರಕಾರ್ಮಿಕರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯ.ಕ್ಷರಾದ ಶ್ರೀಮತಿ ಶಿವರಂಜಿನಿಯಾದವ್, ಉಪಾಧ್ಯಕ್ಷರಾದ ಗುಂಡೇಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಮಕ್ಷರಾದ ಅಜಯ್ ಕುಮಾರ್, ನಗರಸಭೆ ಆಯುಕ್ತರಾದ ಡಿ.ಉಮೇಶ್, ತಾ.ಪಂ.ಕಾರ್ಯನಿರ್ವಹಣಾ ಅಧಿಕಾರಿ ಈಶ್ವರ್ ಪ್ರಸಾದ್, ಡಿ.ವೈಎಸ್.ಪಿ ರೋಷನ್ ಜಮೀರ್, ಸಮಾಜ ಕಲ್ಯಾಣ ಅಧಿಕಾರಿ ಕೃಷ್ಣಮೂರ್ತಿ, ತಾಲ್ಲೂಕು ಆರೋಗ್ಯ ಅಧಿಕಾರಿ ವೆಂಕಟೇಶ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ, ಕ.ಸಾ.ಪ ಅಧ್ಯಕ್ಷ ಡಾ.ನಾಗೇಶ್, ಪಿ.ಎಲ್.ಡಿ.ಬ್ಯಾಂಕ್ ಸಾದತ್ ವುಲ್ಲಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್, ಸೇರಿದಂತೆ ನಗರಸಭೆ ಸದಸ್ಯರು, ನಗರದ ನಾಗರೀಕರು, ಅನೇಕ ಗಣ್ಯರು ಭಾಗವಹಿಸಿದ್ದರು. ಆರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್ ಸ್ವಾಗತಿಸಿದರು, ಸೇವಾದಳ ಶಶಿಧರ್ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Leave a Reply

Your email address will not be published.

Send this to a friend