ಚಿತ್ರದುರ್ಗ : ವಿಷಪೂರಿತ ಮೇವು ಸೇವಿಸಿ ಸುಮಾರು 50 ಹೆಚ್ಚು ಕುರಿಗಳು ಅಸ್ವಸ್ಥ ಗೊಂಡಿದ್ದು ಅದರಲ್ಲಿ ಸುಮಾರು 25 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ದಾರುಣ ಘಟನೆ ದೊಡ್ಡಘಟ್ಟ ಗ್ರಾಮದಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೊಡ್ಡಘಟ್ಟ ಗ್ರಾಮದಲ್ಲಿ ಭಾನುವಾರ ರಾತ್ರಿ 9 ರ ಸಮಯದಲ್ಲಿ ನಡೆದಿದೆ. ಗ್ರಾಮದ ಕರಿಯಪ್ಪ, ನಿಜಲಿಂಗಪ್ಪ ಅವರಿಗೆ ಕುರಿಗಳು ಸೇರಿದ್ದು, ಬದುಕಿನ ನಿರ್ವಹಣೆಗೆ ಕಟ್ಟಿಕೊಂಡಿದ್ದ ಕುರಿಗಾರರ ಬದುಕು ಅತಂತ್ರ ಸ್ಥಿತಿಯಾಗಿದೆ. ಕುರಿಗಾರರು ಎಂದಿನಂತೆ ಕುರಿಗಳನ್ನು ಮೇಯಿಸಲು ಹೋದಾಗಿದ್ದಾರೆ. ಔಡಲ ಚಿಗುರು ಸೊಪ್ಪು ಮತ್ತು ಅಂಟು ಸೊಪ್ಪು ತಿಂದ ಹಿನ್ನೆಲೆಯಲ್ಲಿ ಕುರಿಗಳು ಅಸ್ವಸ್ಥ ಗೊಂಡಿದ್ದಾವೆ. ಬಿಸಿಲು ಹೆಚ್ಚು ಇದ್ದುದ್ದರಿಂದ ನೋಡ ನೋಡುತ್ತಿದ್ದಂತೆ ಕುರಿಗಳು ವಿಲವಿಲನೆ ಒದ್ದಾಡಿ ಪ್ರಾಣ ಬಿಟ್ಟಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು ಬದುಕು ಕೂಡ ಅತಂತ್ರವಾಗಿದೆ. ಕುರಿಗಳು ಸಾವನ್ನಪ್ಪುತ್ತಿದ್ದಂತೆ ಕುರಿಗಾಹಿಗಳು ಆತಂಕಕ್ಕೆ ಒಳಗಾಗಿ ಪಶು ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಊರಿನಿಂದ ಎರಡು ಕಿಲೋ ಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಎಲ್ಲ ಕುರಿಗಳು ಗಿಡಗಂಟೆಗಳಲ್ಲಿ ತೆಡೆದುಕೊಂಡು ಇದ್ದಿವಿ, ಇಲ್ಲಿ ಚಿರತೆಗಳ ಕಾಟ ಹೆಚ್ಚಾಗಿದೆ. ಊಟ ನೀರು ಏನು ಇಲ್ಲ ಎಂದು ಆರೋಪಿಸಿದರು.
ಆದರೆ ಇಂದು ಭಾನುವಾರ ಆಗಿದ್ದರಿಂದ ಪಶು ವೈದ್ಯಾಧಿಕಾರಿಗಳು ಸ್ಪಂದಿಸಿಲ್ಲ ಎಂದು ಕುರಿ ಮಾಲೀಕರು ಅಳಲನ್ನು ತೋಡಿಕೊಂಡರು. ದೂರವಾಣಿ ಮೂಲಕ ವೈದ್ಯಾಧಿಕಾರಿ ಹೊರಕೆರಪ್ಪ ಅವರನ್ನು ಸಂಪರ್ಕಿಸಿದಾಗ ಸರ್ ನಾನು ಊರಲ್ಲಿ ಇದಿನಿ ನಮ್ಮ ಅಸ್ಟೆಂಟ್ ಕಳಿಸಿವಿ, ಪೋಸ್ಟ್ ಮಟನ್ ಮಾಡೋಕೆ ಆಗೋದಿಲ್ಲ, ಬೆಳಿಗ್ಗೆ ನೋಡೋಣ ಎಂದು ಹಾರಿಕೆ ಉತ್ತರ ನೀಡಿದರು. ಸರ್ ಈಗ ಇರುವ ಕುರಿಗಳಿಗಾದರೂ ಚಿಕಿತ್ಸೆ ಕೊಡಬಹುದು ಅಲ್ಲವೇ ಎಂದು ಪ್ರಶ್ನಿಸಿದಾಗ ದೂರವಾಣಿ ಕರೆಯನ್ನು ಕಟ್ ಮಾಡುವ ಮೂಲಕ ಸಮಸ್ಯೆಯಿಂದ ಜಾರಿಕೊಂಡರು.