ಹಿರಿಯೂರಿನಲ್ಲಿ ಜರುಗಿದ ಶ್ರೀಕೃಷ್ಣನ ಶೋಭಾಯಾತ್ರೆ ರಾಜ್ಯದಲ್ಲಿಯೇ ನಂಬರ್ ಒನ್ ಯಾತ್ರೆ ..!

ಚಿತ್ರದುರ್ಗ (ಆಗಸ್ಟ್ 27): ರಾಜ್ಯದಲ್ಲಿಯೇ ಅದ್ದೂರಿಯಾಗಿ ನಡೆಸುವ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆ ಹಿರಿಯೂರು ನಗರದಲ್ಲಿ ಶನಿವಾರ ಅದ್ದೂರಿಯಾಗಿ ನೆರವೇರಿತು. ಅದರಲ್ಲೂ ಈಬಾರಿ ಮುಸ್ಲಿಂ ಸಮಾಜದ ಮುಖಂಡರು ಸೇರಿದಂತೆ ಇತರೆ ಸಮಾಜದ ಬಂಧುಗಳು ಮೆರವಣಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ತಾಲ್ಲೂಕಿನ ಜನತೆಯ ಗಮನ ಸೆಳೆಯಿತು.

ಹಿರಿಯೂರು ತಾಲೂಕು ಗೊಲ್ಲ ಸಮುದಾಯ ಹಾಗೂ ತಾಲೂಕು ಗೊಲ್ಲ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆಗೆ ವಿಶೇಷ ಪೂಜೆ ಸಲ್ಲಿಸಿ, ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು ಚಾಲನೆ ನೀಡಿದರು.

ಪ್ರತಿ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯ ಮೆರವಣಿಗೆ ಮಾತ್ರ ನಡೆಯುತ್ತಿದ್ದು, ಕಳೆದ ನಾಲ್ಕೈದು ವರ್ಷಗಳಿಂದ ಶ್ರೀಕೃಷ್ಣ ಮೆರವಣಿಗೆ ಜೊತೆಗೆ ಶ್ರೀ ವಿನಾಯಕ ಹಾಗೂ ಶ್ರೀ ಆಂಜನೇಯ ಸ್ವಾಮಿಯ ದೇವರ ಮೆರವಣಿಗೆ ಕೂಡ ನಡೆಸಿಕೊಂಡು ಬರುತ್ತಿರುವುದು ವಿಶೇಷವಾಗಿರುವುದರ ಜೊತೆಗೆ ನಗರದ ವೃತ್ತಿಗಳಿಗೆ ಕೇಸರಿ ಬಣ್ಣದ ಬಟ್ಟೆಗಳ ಅಲಂಕಾರ ನೋಡುಗರ ಕಣ್ಮನ ಸೆಳೆಯುವಂತಿತ್ತು.

ಹಿರಿಯೂರಿನ ವೇದಾವತಿ ನಗರದಲ್ಲಿರುವ ಶ್ರೀಕೃಷ್ಣ ದೇವಸ್ಥಾನದಲ್ಲಿ 9 ದಿನಗಳ ವಿಶೇಷ ಪೂಜೆ ನೇರವೇರಿಸಿದ ಬಳಿಕ ಈ ಬೃಹತ್ ಶೋಭಾಯಾತ್ರೆ ಮೆರವಣಿಗೆ ಜರುಗುತ್ತದೆ. ಗೊಲ್ಲ ಸಮುದಾಯದಿಂದ ಆಚರಣೆ ಮಾಡುವ ಈ ಮೆರವಣಿ ರಾಜ್ಯದಲ್ಲಿಯೇ ಹಿರಿಯೂರು ಅದ್ದೂರಿಯಾಗಿ ಮಾಡಲಾಗುತ್ತದೆ.

ಹೂವುಗಳಿಂದ ಶೃಂಗಾರ ಮಾಡಿದ ಮೂರು ಬೆಳ್ಳಿ ರಥದಲ್ಲಿ ಶ್ರೀಕೃಷ್ಣನ ಜೊತೆಗೆ ಶ್ರೀ ವಿನಾಯಕ, ಶ್ರೀ ಆಂಜನೇಯ ಸ್ವಾಮಿಯನ್ನು ಕೂರಿಸಿ ಮೆರವಣಿಗೆ ನಡೆಸಲಾಗುವುದು. ಈ ಬೃಹತ್ ಶೋಭಾಯಾತ್ರೆ ಹಿರಿಯೂರಿನ ವೇದಾವತಿ ನಗರದಿಂದ ಆರಂಭಗೊಂಡು ಟಿಬಿ ವೃತ್ತದ ಮೂಲಕ ತಾಲೂಕು ಕಛೇರಿ, ಗಾಂಧಿ ಸರ್ಕಲ್ ಮೂಲಕ ಆಸ್ಪತ್ರೆ ವೃತ್ತ ತಲುಪಿ ನಂತರ ಚರ್ಚ್ ರಸ್ತೆ ಹಾಗೂ ಹುಳಿಯಾರು ರಸ್ತೆಯಿಂದ ನಂತರ ಅಲ್ಲಿಂದ ಗಾಂಧಿ ವೃತ್ತ ತಲುಪಿ ವಾಪಸ್ ದೇವಸ್ಥಾನ ತಲುಪಿತು‌.

ಈ ಮೆರವಣಿಗೆ ಕಳೆದ ಹದಿನೈದು ದಿನಗಳಿಂದ ಸಿದ್ದತೆ ನಡೆಸಿಕೊಂಡು ತಾಲೂಕಿನ ಪ್ರತಿಯೊಂದು ಗೊಲ್ಲರಹಟ್ಟಿಗಳಿಗೆ ಹೋಗಿ ಪ್ರಚಾರ ಮಾಡಲಾಗುತ್ತದೆ. ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಹಾಗೂ ರಾಜ್ಯದ ಬೇರೆ ಬೇರೆ ತಾಲೂಕುಗಳಿಂದ ಕೃಷ್ಣನ ಭಕ್ತರು ಮೆರವಣಿಗೆ ಆಗಮಿಸುತ್ತಾರೆ. ಶ್ರೀಕೃಷ್ಣ ಜನ್ಮಾಷ್ಟಮಿಯ ಮೆರವಣಿಗೆ ಮಾಡುವುದು ರಾಜ್ಯದಲ್ಲಿಯೇ ಹಿರಿಯೂರು ಮೊದಲ ಸ್ಥಾನ ಪಡೆದಿದೆ.

ಪ್ರತಿವರ್ಷದಂತೆ ಈ ವರ್ಷವೂ ಶೋಭಾಯಾತ್ರೆಯಲ್ಲಿ ಗೊಂಬೆಆಟ, ಉರುಮೆ ವಾದ್ಯ, ತಮಟೆ, ವೀರಗಾಸೆ, ನಾಸಿಕ್ ಡೋಲು, ಚಂಡಿ ಮದ್ದಾಳೆ, ಕೀಲುಕುದುರೆ ಈಗೆ ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.

ಗಮನ ಸೆಳೆದ ಕುಣಿತ : ವಿವಿಧ ಸಾಂಸ್ಕೃತಿಕ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಇವುಗಳ ತಾಳಕ್ಕೆ ತಕ್ಕಂತೆ ಯುವಕರು ಡಿಜೆ ಸೌಂಡಿಗೆ ಕುಣಿದು ಕುಪ್ಪಳಿಸಿದರು. ಮಹಿಳೆಯರು ಸೇರಿದಂತೆ ಮಕ್ಕಳು ಸಹ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಅಪ್ಪು ಪೋಟೋ ಮೆರವಣಿಗೆ: ಬೃಹತ್ ಶೋಭಾಯಾತ್ರೆ ಮೆರವಣಿಗೆಯಲ್ಲಿ ದಿವಂಗತ ಪುನೀತ್ ರಾಜಕುಮಾರ್ ಅವರ ಭಾವಚಿತ್ರ ಪೋಟೋ ಹಿಡಿದು ಮೆರವಣಿಗೆ ನಡೆಸಿದರು.

ಈ ಬೃಹತ್ ಶೋಭಾಯಾತ್ರೆಯಲ್ಲಿ ವಿವಿಧ ಸಮುದಾಯಗಳ ಮುಖಂಡರು ಹಾಗೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದು ಮತ್ತೊಂದು ವಿಶೇಷವಾಗಿ ಕಂಡು ಬಂದಿತ್ತು.

ಉಪಾಹಾರ, ಮಜ್ಜಿಗೆ ವಿತರಣೆ : ಶ್ರೀಕೃಷ್ಣ ಜನ್ಮಾಷ್ಟಮಿಯ ಬೃಹತ್ ಶೋಭಾಯಾತ್ರೆ ಹಿನ್ನೆಲೆಯಲ್ಲಿ ನಗರ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಮಜ್ಜಿಗೆ, ಲಘು ಉಪಹಾರ ವಿತರಣೆ ಮಾಡಲಾಯಿತು. ಸೂಪರ್ ಮಾರ್ಕೆಟ್,ಗಾಂಧಿ ಸರ್ಕಲ್, ನಗರಸಭೆ ಬಳಿ, ಈಗೆ ಮೆರವಣಿಗೆಯೂದ್ದಕ್ಕೂ ಅಲ್ಲಿಲ್ಲಿ ನೀರು, ಮಜ್ಜಿಗೆ ಸೇರಿದಂತೆ ಲಘು ಉಪಹಾರ ವಿತರಣೆ ಮಾಡಿದರು.

Leave a Reply

Your email address will not be published.

Send this to a friend