ಹಿರಿಯೂರು : ವಿಶ್ವಕರ್ಮ ಒಬ್ಬ ಜಗತ್ತಿನ ವಾಸ್ತು ಶಿಲ್ಪಿ ಹಾಗೂ ದೇವತೆಗಳನ್ನು ಸೃಷ್ಟಿಸಿದ ಸೃಷ್ಟಿಕರ್ತ ಎಂದರೆ ತಪ್ಪಾಗಲಾರದು ಜೊತೆಗೆ ವಿಶ್ವಕರ್ಮನನ್ನು ಜಗತ್ತಿನ ಸಾಂಸ್ಕೃತಿಕ ರಾಯಭಾರಿ ಅಂತ ಕರೆಯುತ್ತಾರೆ ಎಂದು ವಾಣಿ ಕಾಲೇಜಿನ ಪ್ರಾಂಶುಪಾಲ ಡಾ. ಡಿ. ಧರಣೇಂದ್ರಯ್ಯ ಅಭಿಪ್ರಾಯ ಪಟ್ಟರು. ಇಂದು ನಗರದ ತಾಲೂಕು ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಶ್ವಕರ್ಮ ಸಮಾಜ ಒಂದು ಶ್ರಮಿಕರ ಸಮಾಜವಾಗಿದೆ. ಈ ಸಮುದಾಯದಲ್ಲಿ ಬೆಳ್ಳಿ ಬಂಗಾರದ ಆಭರಣಗಳ ತಯಾರಿಕೆಯಲ್ಲಿ ಕಲೆಭರಿತ ಕುಶಲಕರ್ಮಿಗಳು, ಅದ್ಭುತ ಕಲಾ ವರ್ಣಕಾರರು ಮತ್ತು ಶಿಲ್ಪಕಾರರು ಇದ್ದು ಆಭರಣಗಳ ತಯಾರಿಕೆಯಲ್ಲಿ ವಿಶೇಷ ನೈಪುಣ್ಯತೆ ಹೊಂದಿದ್ದಾರೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.
ಈ ಸಮಾಜದ ಕಲೆಯ ನೈಪುಣ್ಯತೆಗೆ ಭಾರತದ ನಳಂದಾ, ದ್ವಾರಕ, ಅಜಂತಾ, ಎಲ್ಲೋರಾ, ಕೋನಾರ್ಕ್ ನಾ ಸೂರ್ಯ ದೇವಾಲಯ ಅದ್ಭುತವಾದ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜಿ.ಹೆಚ್. ಸತ್ಯನಾರಾಯಣ, ಸಮಾಜದ ಅಧ್ಯಕ್ಷ ಸಿ. ನಾರಾಯಣಚಾರ್, ನಗರ ಪಿಎಸ್ಐ ನಾಗರಾಜ್, ನಗರಸಭಾ ಸದಸ್ಯ ಬಾಲಕೃಷ್ಣ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.