ಚಿತ್ರದುರ್ಗ ( ಆಗಸ್ಟ್ ೧೪) : ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಏಕೈಕ ಜೀವನಾಡಿಯಾಗಿರುವ ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಜಲಾಶಯ ವೀಕ್ಷಿಸಲು ಭಾನುವಾರ ಪ್ರವಾಸಿಗರ ಸಂಖ್ಯೆ ಹರಿದು ಬಂದಿತ್ತು.
88 ವರ್ಷಗಳ ಬಳಿಕ ವಿವಿ ಸಾಗರ ಜಲಾಶಯಕ್ಕೆ ದಾಖಲೆ ಮಟ್ಟದಲ್ಲಿ ನೀರು ಸಂಗ್ರಹವಾಗುತ್ತಿದೆ. ಇಂದಿನ ವರದಿಯಲ್ಲಿ 2569 ಕ್ಯೂಸೆಕ್ ಒಳಹರಿವು ಇದ್ದು ಪ್ರಸ್ತುತ ಜಲಾಶಯದ ನೀರಿನ ಮಟ್ಟ 127.25 ಅಡಿ ನೀರು ಸಂಗ್ರಹವಾಗಿದೆ. ಇನ್ನು ಜಲಾಶಯ ಕೋಡಿ ಬೀಳಲು ದಿನಗಣನೆ ಆರಂಭವಾಗಿದ್ದು, 2.75 ಅಡಿ ಜಲಾಶಯಕ್ಕೆ ಹರಿದು ಬಂದರೆ ಡ್ಯಾಂ ಎರಡನೇ ಬಾರಿಗೆ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ.
ಈ ಹಿನ್ನೆಲೆಯಲ್ಲಿ ಇಂದು ಭಾನುವಾರ ರಜೆ ದಿನವಾಗಿದ್ದರಿಂದ ಜಲಾಶಯ ವೀಕ್ಷಿಸಲು ಪ್ರವಾಸಿಗರು ದಂಡೇ ಲಗ್ಗೆ ಇಟ್ಟಿತ್ತು. ಇನ್ನು ಪ್ರವಾಸಿಗರು ಜಲಾಶಯದ ಬಳಿ ಇರುವ ಮಂಟಪ ಹಾಗೂ ಪ್ರವಾಸಿ ಮಂದಿರದ ಬಳಿ ಸೆಲ್ಫಿ ಪೋಟೋ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿ ಕಂಡು ಬಂದಿತ್ತು.
ಬೆಂಗಳೂರು, ತುಮಕೂರು, ಹಾಸನ, ದಾವಣಗೆರೆ, ಬಳ್ಳಾರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿಂದ ಸಾವಿರಾ ಪ್ರವಾಸಿಗರು ಕಾರು, ಬೈಕ್, ಆಟೋ, ಬಸ್ ಸೇರಿದಂತೆ ಇತರೆ ವಾಹನಗಳಲ್ಲಿ ಡ್ಯಾಂ ನೋಡಲು ಬಂದಿದ್ದರು.
ದೂರದಿಂದ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಸೇರಿದಂತೆ ಸುಮಾರು 3 ರಿಂದ 5 ಸಾವಿರ ಪ್ರವಾಸಿಗರು ಬಂದಿದ್ದಾರೆ ಎಂದು ವಿಶ್ವೇಶ್ವರಯ್ಯ ಜಲ ನಿಗಮದ ಎಇಇ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ 88 ವರ್ಷಗಳ ಬಳಿಕ ದಾಖಲೆ ಬರೆಯುತ್ತಿರುವ ವಾಣಿ ವಿಲಾಸ ಜಲಾಶಯ ನೋಡಲು ಜನರು ಲಗ್ಗೆ ಇಟ್ಟಿದ್ದಾರೆ. ಇನ್ನು ತಾಲ್ಲೂಕಿನ ಜನತೆ ಕೋಡಿ ಬೀಳುವ ದೃಶ್ಯವನ್ನು ನೋಡಿ ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.