ಅತಿ ಶೀಘ್ರದಲ್ಲೇ ಡ್ಯಾಂ ಬಳಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಸ್ಥಾಪನೆ : ಶಾಸಕಿ ಕೆ ಪೂರ್ಣಿಮಾ

ಚಿತ್ರದುರ್ಗ ( ಸ.೩) : ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಐತಿಹಾಸಿಕ ವಾಣಿವಿಲಾಸ ಸಾಗರ ಜಲಾಶಯ 1933ರ ನಂತರ ವರುಣನ ಕೃಪೆ ಮತ್ತು ಭದ್ರಾ ಮೇಲ್ದಂಡೆ ಜಲಾಶಯದಿಂದ 130 ಅಡಿ ನೀರು ತುಂಬಿ ಕೋಡಿ ಬಿದ್ದಿದ್ದು, ಜಿಲ್ಲೆಯ‌ ಜನತೆ ಹಾಗೂ ರೈತರ ಮುಖದಲ್ಲಿ ಸಂತಸ ನವ ಚೈತನ್ಯ ಮೂಡಿಸಿದೆ. ಈ ಸಂಭ್ರಮಕ್ಕೆ ಕಾರಣರಾದ ಮೈಸೂರಿನ ಮಹಾರಾಜರು ಹಾಗೂ ಮಹಾರಾಣಿಯವರನ್ನು ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

ವಿವಿ ಸಾಗರ ಡ್ಯಾಂ ಕೋಡಿ ಬಿದ್ದ ಹಿನ್ನೆಲೆಯಲ್ಲಿ ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಬರ ಪೀಡಿತ ಪ್ರದೇಶವಾದ ಚಿತ್ರದುರ್ಗ ಜಿಲ್ಲೆಗೆ ಕುಡಿಯುವ ನೀರು ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವ ದೃಷ್ಟಿಯಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ದೂರದೃಷ್ಟಿಯ ಕೊಡುಗೆಯಿಂದಾಗಿ ಇಂದು ತಾಲ್ಲೂಕಿನ ಸಾವಿರಾರು ರೈತರ ಬಾಳಲ್ಲಿ ಹೆಸರಾಗಿದ್ದಾರೆ ಎಂದರು.

ವಾಣಿ ವಿಲಾಸ ಡ್ಯಾಂ ನಿರ್ಮಾಣ ಮಾಡಿದ್ದರಿಂದ ತಾಲೂಕಿನಲ್ಲಿ ಕಬ್ಬು ಬೆಳೆಯಲು ಆರಂಭಿಸಿದರು. ಆಗ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಸಹ ಪ್ರಾರಂಭವಾಗಿ ನೂರಾರು ಜನರಿಗೆ ಉದ್ಯೋಗ ದೊರಕಿತು. ದುರಾದೃಷ್ಟವಶಾತ್ ಜಲಾಶಯದಲ್ಲಿ ನೀರು ಇಲ್ಲದೆ ಇದ್ದುದರಿಂದ ಕಬ್ಬು ಬೆಳೆಯಲು ನಿಲ್ಲಿಸಿದರು. ಈಗ ಕಾರ್ಖಾನೆ ಸ್ಥಗಿತಗೊಂಡಿದೆ ಡ್ಯಾಂ ನಲ್ಲಿ ನೀರು ಭರ್ತಿಯಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಈ ಬಗ್ಗೆ ಸಂಬಂಧಪಟ್ಟ ಸಕ್ಕರೆ ಕಾರ್ಖಾನೆ ಸಚಿವರ ಬಗ್ಗೆ ಒಂದು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ಹೇಳಿದರು.

ನಮ್ಮ ತಾಲೂಕಿಗೆ ಅಣೆಕಟ್ಟು ನಿರ್ಮಿಸುವ ಮೂಲಕ ಈ ತಾಲ್ಲೂಕನ್ನು ಸಮೃದ್ಧಗೊಳಿಸಿ, ಅಚ್ಚಹಸಿರಿನಿಂದ ಕಂಗೊಳಿಸುವಂತೆ ಮಾಡಿದ ಮೈಸೂರು ಅರಸರ ಜ್ಞಾಪಕಾರ್ಥವಾಗಿ ಅವರ ಪ್ರತಿಮೆಯನ್ನು ಅನಾವರಣ ಮಾಡಲು ಸಿದ್ಧತೆ ನಡೆಸಿದ್ದು, ಮುಂದಿನ ಮುರ್ನಾಲ್ಕು ತಿಂಗಳಲ್ಲಿ ಪ್ರತಿಮೆ ಅನಾವರಣ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಭಾರತೀಯ ಸಂಸ್ಕೃತಿಯನ್ನು ಕೈ ಬೀಡಲು ಸಾಧ್ಯವಿಲ್ಲ ಆಗಾಗಿ ಡ್ಯಾಂ ಬಹುವರ್ಷಗಳ ಬಳಿಕ ತುಂಬಿದೆ. ಕೋಡಿ ಹರಿದಿರುವ ವಾಣಿವಿಲಾಸ ಜಲಾಶಯಕ್ಕೆ ಬಾಗಿನ ಅರ್ಪಿಸುವುದು ನಮ್ಮ ಸಂಪ್ರದಾಯವಾಗಿದ್ದು, ಈ ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ ಹಾಗೂ ಮೈಸೂರು ಮಹಾರಾಜರಿಗೆ ಪತ್ರ ಬರೆಯಲಾಗಿದೆ. ಜೊತೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಕಾರ್ಯಕ್ರಮಕ್ಕೆ ಬರುವಂತೆ ಮನವಿ ಮಾಡಲಾಗಿದೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಅವರು ದಿನಾಂಕ ನಿಗದಿಪಡಿಸಿದ ನಂತರ ಬಹು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ನಾನು 2018 ರಲ್ಲಿ ಶಾಸಕರಾಗಿ ಆಯ್ಕೆಯಾದ ಮೇಲೆ ನನ್ನ ಮೇಲೆ ಬಹು ದೊಡ್ಡ ಜವಾಬ್ದಾರಿ ಎದುರಾಯಿತು. ಇದಕ್ಕೂ ಮೊದಲು ಭದ್ರಾ ಮೇಲ್ದಂಡೆ ಯೋಜನೆಯ ನೀರಿಗಾಗಿ ತಾಲ್ಲೂಕಿನಲ್ಲಿ ರೈತ ಹೋರಾಟಗಾರರು ಹಾಗೂ ಪ್ರಗತಿಪರ ಸಂಘಟನೆಗಳಿಂದ ಭದ್ರಾಮೇಲ್ದಂಡೆ ಯೋಜನೆಗಾಗಿ ಹೋರಾಟ ನಡೆಸಿದ್ದು, ಅದರ ಪ್ರತಿಫಲವಾಗಿ 2008 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಈ ಯೋಜನೆಗೆ ಬಜೆಟ್ ನಲ್ಲಿ ಅನುದಾನಕ್ಕೆ ಮೊದಲ ಬಾರಿಗೆ ಹಸಿರು ನಿಶಾನೆ ನೀಡಿದ್ದರು.
ಅಷ್ಟೇ ಅಲ್ಲ, ಅಂದಿನ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿರವರು ಸಹ ವಾಣಿವಿಲಾಸ ಸಾಗರಕ್ಕೆ ಭದ್ರಾ ಜಲಾಶಯದಿಂದ 5 ಟಿ.ಎಂ.ಸಿ ನೀರು ಅನುಮೋದನೆ ನೀಡಿ ಮಾಡಿ ಆದೇಶ ನೀಡಿದ್ದರು.
ಬಿಜೆಪಿ ಸರ್ಕಾರದ ಇಚ್ಚಾಶಕ್ತಿ ಹಾಗೂ ನಮ್ಮ ಜಿಲ್ಲೆಯ ಸಂಸದರು, ಶಾಸಕರು, ರೈತಹೋರಾಟಗಾರರ ಪರಿಶ್ರಮದ ಪ್ರತಿಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಯಿತು. 2013ರ ಕಾಂಗ್ರೆಸ್ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿತು.ಆದರೆ ಸರಿಯಾದ ಸಮಯಕ್ಕೆ ಕಾಮಗಾರಿ ಮುಗಿಸಲು ಆಗಲಿಲ್ಲ 2018ರ ಬಳಿಕ ಬಂದ ಬಿಜೆಪಿ ಸರ್ಕಾರ ಇಚ್ಚಾಶಕ್ತಿಯಿಂದ ಭದ್ರಾ ಮೇಲ್ದಂಡೆ ಕಾಮಗಾರಿ ವೇಗವಾಗಿ ಮುಗಿಸಿ ವಿವಿ ಸಾಗರ ಡ್ಯಾಂಗೆ 2019ರಲ್ಲಿ ಮೊದಲ ಬಾರಿಗೆ ಭದ್ರಾ ಮೇಲ್ದಂಡೆ ಯೋಜನೆ ನೀರು ಬರಲು ಕಾರಣವಾಯಿತು‌. ಆಗಾಗಿ ಜಲಾಶಯಕ್ಕೆ ಭದ್ರಾ ನೀರು ಹಾಗೂ ಹೆಚ್ಚು ಮಳೆಯಿಂದಾಗಿ ವಾಣಿವಿಲಾಸ ಸಾಗರ ಜಲಾಶಯ ಕೋಡಿ ಬಿದ್ದಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್ಆರ್ ತಿಮ್ಮಯ್ಯ, ನೀರಾವರಿ ಹೋರಾಟಗಾರದ ಆರನಕಟ್ಟೆ ಶಿವಕುಮಾರ್, ಆಲೂರು ಸಿದ್ಧರಾಮಣ್ಣ, ಆರ್.ಕೆ ಗೌಡ್ರು, ಮೂಡಲಗಿರಿಯಪ್ಪ, ಪಿಟ್ಲಾಲಿ ಶ್ರೀನಿವಾಸ್, ರಾಮಚಂದ್ರ ಕಸವನಹಳ್ಳಿ, ದೇವರಾಜ್ ನಾಗಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published.

Send this to a friend