ಚಿತ್ರದುರ್ಗ : ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಬೇಡ, ಇದರ ಬದಲಿಗೆ ಶ್ರೀ ಬಸವೇಶ್ವರ ಅಭಿವೃದ್ಧಿ ನಿಗಮ ಸ್ಥಾಪಿಸಿ ಎಂದು ಹೊಸದುರ್ಗದ ಸಾಣೆಹಳ್ಳಿ ತರಳಬಾಳು ಪೀಠದ ಡಾ.ಪಂಡಿತಾರಾಧ್ಯ ಶ್ರೀಗಳು ಮುಖ್ಯಮಂತ್ರಿಗಳಿ ಸಲಹೆ ನೀಡಿದ್ದಾರೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಸಾಣೆಹಳ್ಳಿ ಪೀಠದಲ್ಲಿ ಈ ಕುರಿತು ಮಾತನಾಡಿರುವ ಶ್ರೀಗಳು, ಈಗಾಗಲೇ ವೀರಶೈವ – ಲಿಂಗಾಯತರ ನಡುವೆ ಭಿನ್ನಾಭಿಪ್ರಾಯಗಳಿವೆ ಹೀಗಿರುವಾಗ “ಬಸವೇಶ್ವರ ಅಭಿವೃದ್ಧಿ ನಿಗಮ” ಸ್ಥಾಪಿಸಬೇಕು ಎಂದರು. ಅಲ್ಲದೆ ಈ ನಿಗಮಕ್ಕೆ ಸಾವಿರಾರು ಕೋಟಿ ಅನುಧಾನ ಮೀಸಲಿಡಬೇಕು ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಮರಾಠಿಗರಿಗೆ ಶೇ16% ಮೀಸಲಾತಿ ನೀಡಿರುವಂತೆ, ಕರ್ನಾಟಕದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿರುವ ಲಿಂಗಾಯತರಿಗೆ ಶೇ.16% ಮೀಸಲಾತಿ ಕೊಡಿ, ಅದರ ಜೊತೆಗೆ ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ಸಿಗುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿ, ಇದರಿಂದ ನಮ್ಮ ಸಮುದಾಯದ ಬಡ ಮಕ್ಕಳಿಗೆ ಅನೇಕ ಸವಲತ್ತುಗಳು ಸಿಗುತ್ತದೆ, ಅದು ಬಿಟ್ಟು ಅಭಿವೃದ್ಧಿ ನಿಗಮಗಳ ಸ್ಥಾಪನೆ ವಿಚಾರವನ್ನು ಚುನಾವಣೆಯ ಗಿಮಿಕ್ ಗಾಗಿ ಮಾಡಬೇಡಿ. ಮುಂದೆ ಬರುವ ಸರ್ಕಾರಗಳು ಇದನ್ನು ಕಡೆಗಣಿಸಬಹುದು. ಹೀಗಾಗಿ ಯಾವುದೇ ರಾಜಕೀಯ ಆಲೋಚನೆಗಳನ್ನ ಬದಿಗಿಟ್ಟು, ರಾಜಕೀಯೇತರ ವ್ಯಕ್ತಿಗಳನ್ನು ಅಭಿವೃದ್ಧಿ ನಿಗಮಗಳ ಅಧ್ಯಕ್ಷರನ್ನಾಗಿ ಮಾಡಬೇಕು ಎಂದರು.
ಈ ಮೂಲಕ ಎಲ್ಲಾ ಬಡವರ್ಗದ ಜನರಿಗೂ ಅಭಿವೃದ್ಧಿ ನಿಗಮದಿಂದ ಅನುಕೂಲ ಸಿಗುವಂತೆ ಮಾಡಿ, ಆರ್ಥಿಕ, ಸಾಮಾಜಿಕ ಹಾಗು ಶೈಕ್ಷಣಿಕವಾಗಿ ಹಿಂದುಳಿದಿರುವವರಿಗೆ ಮೀಸಲಾತಿ ಸಿಗುವಂತಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಎಲ್ಪರೂ ಮೀಸಲಾತಿ ಕೇಳುತ್ತಿರುವುದು ವಿಷಾಧನೀಯ ಎಂದು ಬೇಸರ ಹೊರಹಾಕಿದ್ದಾರೆ.