ಹೊಸಕೋಟೆ : ರೈಲ್ವೆ ಹಳಿಯ ಮೇಲೆ ಅನುಮಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು, ಮೃತ ಮಹಿಳೆಯ ಕುಟುಂಬಸ್ಥರು ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ ಕೊಲೆ ಮಾಡಿದ್ದಾರೆಂದು ಆರೋಪ ಮಾಡುತ್ತಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ನಡವತ್ತಿ ಗ್ರಾಮದ ಭಾವನಾ (21) ಎಂದು ತಿಳಿದು ಬಂದಿದೆ. ಈಕೆಯನ್ನು ಕಳೆದ 6 ತಿಂಗಳ ಹಿಂದೆ ಆಲಪ್ಪನಹಳ್ಳಿ ಗ್ರಾಮದ ಗಜೇಂದ್ರ ಎಂಬುವವನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಮದುವೆಯಾದ ದಿನದಿಂದಲೂ ಸಹ ಗಂಡ ಹಾಗೂ ಆತನ ಕುಟುಂಬದವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ಮೃತ ಭಾವನಾಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹಲ್ಲೆ ಗೈದು ಕೊರಲೂರು- ದೇವನಗೊಂಡಿ ರೈಲ್ವೆ ಹಳಿಯ ಮೇಲೆ ಮೃತದೇಹ ತಂದು ಹಾಕಿದ್ದಾರೆ ಎಂದು ತಿಳಿದು ಬಂದಿದೆ.ಬಳಿಕ ಹೊಸಕೋಟೆ ಠಾಣೆಯಲ್ಲಿ ಮಹಿಳೆ ಕಾಣೆಯಾಗಿದ್ದಾಳೆಂದು ಗಂಡನ ಮನೆಯವರು ದೂರು ದಾಖಲು ಮಾಡಿದ್ದಾರೆಂದು ಮಹಿಳೆಯ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಹೊಸಕೋಟೆ ಪೋಲೀಸ್ ಠಾಣೆಯ ಮುಂಭಾಗ ಮೃತ ಮಹಿಳೆಯ ಶವವಿಟ್ಟು ಕುಟುಂಬಸ್ಥರು ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪ್ರತಿಭಟನೆ ನಡೆಸಿದರು. ಹೊಸಕೋಟೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.